May 17, 2026
Sunday, May 17, 2026
spot_img

ವಿಜಯ್ ಸಾಧನೆ ಸಾಮಾನ್ಯದ್ದಲ್ಲ: MGR, NTRಗೇ ಟಕ್ಕರ್ ಕೊಟ್ಟ ‘ದಳಪತಿ’ಯನ್ನು ಹೊಗಳಿದ ತಲೈವಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷ ಬಹುಮತ ಪಡೆದು ಸರ್ಕಾರ ರಚಿಸಿದ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಭಾನುವಾರ (ಮೇ 17) ಭರ್ಜರಿ ತೆರೆ ಎಳೆದಿದ್ದಾರೆ. ಚೆನ್ನೈನ ಪೋಯಿಸ್ ಗಾರ್ಡನ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಟೀಕಾಕಾರರಿಗೆ ನೇರ ಹಾಗೂ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಸೋಲುಂಡ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನು ರಜನಿಕಾಂತ್ ಭೇಟಿಯಾಗಿದ್ದನ್ನು ಕೆಲವರು ತೀವ್ರವಾಗಿ ಟೀಕಿಸಿದ್ದರು. ವಿಜಯ್ ಸಿಎಂ ಆಗುವುದನ್ನು ತಡೆಯಲು ರಜನಿ ಈ ಭೇಟಿ ಮಾಡಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ತಲೈವಾ, “ನನ್ನ ಮತ್ತು ಸ್ಟಾಲಿನ್ ಸ್ನೇಹ 35-40 ವರ್ಷಗಳಷ್ಟು ಹಳೆಯದು. ಸೋಲಿನಿಂದ ಬೇಸರಗೊಂಡಿದ್ದ ಸ್ನೇಹಿತನನ್ನು ಸಾಂತ್ವನಗೊಳಿಸಲು ಹೋಗಿದ್ದೆನೇ ಹೊರತು, ರಾಜಕೀಯ ಮಾಡಲು ಅಲ್ಲ. ಅನಗತ್ಯವಾಗಿ ಮಾತನಾಡಲು ರಜನಿ ಅಷ್ಟು ಕೀಳು ಮಟ್ಟದ ವ್ಯಕ್ತಿಯಲ್ಲ” ಎಂದು ಕಿಡಿಕಾರಿದರು.

ನಟ ವಿಜಯ್ ಸಿಎಂ ಆಗಿರುವುದಕ್ಕೆ ರಜನಿಕಾಂತ್ ಅಸೂಯೆ ಪಡುತ್ತಿದ್ದಾರೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, “ವಿಜಯ್ ಗೆಲುವು ಸಾಧಿಸುತ್ತಲೇ ನಾನು ಎಕ್ಸ್ ಮೂಲಕ ಶುಭ ಹಾರೈಸಿದ್ದೆ. ನಾನು ರಾಜಕೀಯದಲ್ಲೇ ಇಲ್ಲದಿರುವಾಗ ಅಸೂಯೆ ಪಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ನನ್ನ ಸಮಕಾಲೀನರಾದ ಕಮಲ್ ಹಾಸನ್ ಸಿಎಂ ಆಗಿದ್ದರೆ ಜಿಗುಪ್ಸೆ ಬರಬಹುದಿತ್ತೇನೋ! ಆದರೆ ವಿಜಯ್‌ಗೂ ನನಗೂ 25 ವರ್ಷಗಳ ತಲೆಮಾರಿನ ಅಂತರವಿದೆ. ನಮ್ಮಿಬ್ಬರ ನಡುವೆ ಯಾವುದೇ ಸ್ಪರ್ಧೆಯಿಲ್ಲ” ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ವಿಜಯ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ ರಜನಿಕಾಂತ್, “ವಿಜಯ್ ತಮ್ಮ 52ನೇ ವಯಸ್ಸಿನಲ್ಲಿಯೇ ಎಂಜಿಆರ್ ಮತ್ತು ಎನ್‌ಟಿಆರ್ ಅವರಿಗಿಂತ ದೊಡ್ಡ ರಾಜಕೀಯ ಸಾಧನೆ ಮಾಡಿದ್ದಾರೆ. ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಪ್ರಬಲ ದ್ರಾವಿಡ ಪಕ್ಷಗಳನ್ನು ಎದುರಿಸಿ ಏಕಾಂಗಿಯಾಗಿ ಗೆದ್ದಿರುವುದು ಸಾಮಾನ್ಯ ವಿಷಯವಲ್ಲ. ಅವರ ಮೇಲೆ ನನಗೆ ದೊಡ್ಡ ನಿರೀಕ್ಷೆಗಳಿವೆ. ನನ್ನ ಬೆಂಬಲ ಮತ್ತು ಶುಭ ಹಾರೈಕೆಗಳು ಯಾವಾಗಲೂ ವಿಜಯ್ ಜೊತೆ ಇರುತ್ತವೆ” ಎಂದು ತಲೈವಾ ಪ್ರಶಂಸಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !