ಹೊಸದಿಗಂತ ವರದಿ ಬೆಳಗಾವಿ:
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 26ನೇ ವಾರ್ಷಿಕ ಘಟಿಕೋತ್ಸವವು ಸೆ.26ರಂದು ಬೆಳಿಗ್ಗೆ 11 ಗಂಟೆಗೆ ಜ್ಞಾನ ಸಂಗಮದಲ್ಲಿ ನಡೆಯಲಿದೆ ಎಂದು ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಹೇಳಿದರು.
ಬುಧವಾರ ವಿಟಿಯುನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳ ಕುಲಾಧಿಪತಿ ಥಾವರ್ಚಂದ್ ಗೆಹ್ಲೋಟ್ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉಪಸ್ಥಿತರಿರುವರು. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಈ ಬಾರಿ ಒಟ್ಟು 74,763 ಪದವಿ ವಿದ್ಯಾರ್ಥಿಗಳು ಹಾಗೂ 329 ಪಿಎಚ್.ಡಿ. ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಇವರಲ್ಲಿ ಬಿಇ ಮತ್ತು ಬಿಟೆಕ್ನ 74,009, ಬಿಇ ಆರ್ಕಿಟೆಕ್ಚರ್ನ 725, ಬಿಇ ಪ್ಲಾನಿಂಗ್ನ 12 ಹಾಗೂ ಬಿಎಸ್ಸಿಯ 17 ವಿದ್ಯಾರ್ಥಿಗಳು ಸೇರಿದ್ದಾರೆ.
ಮೂವರಿಗೆ ಗೌರವ ಡಾಕ್ಟರೇಟ್ :
ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಸಿಎಂಆರ್ ಜ್ಞಾನಧಾರ ಟ್ರಸ್ಟ್ ಅಧ್ಯಕ್ಷೆ ಡಾ. ಸಬಿತಾ ರಾಮಮೂರ್ತಿ, ಆರ್.ವಿ. ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ. ಎಂ.ಪಿ. ಶ್ಯಾಮ್ ಹಾಗೂ ಎಐಸಿಟಿಇ ಮಾಜಿ ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಂ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ಕುಲಪತಿ ತಿಳಿಸಿದರು.
45 ವಿದ್ಯಾರ್ಥಿಗಳಿಗೆ 94 ಚಿನ್ನದ ಪದಕ:
ವಿಟಿಯು ಚಿನ್ನದ ಪದಕಕ್ಕೆ 38 ವಿದ್ಯಾರ್ಥಿಗಳು ಅರ್ಹರಾಗಿದ್ದು, 49 ವಿದ್ಯಾರ್ಥಿಗಳು ದತ್ತಿ ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆಯಲಿದ್ದಾರೆ. ಇನ್ನೂ ಏಳು ವಿದ್ಯಾರ್ಥಿಗಳು ಕೇವಲ ದತ್ತಿ ಚಿನ್ನದ ಪದಕಕ್ಕೆ ಅರ್ಹರಾಗಿದ್ದಾರೆ. ಒಟ್ಟಾರೆ 45 ವಿದ್ಯಾರ್ಥಿಗಳಿಗೆ 94 ಚಿನ್ನದ ಪದಕಗಳು ಪ್ರದಾನವಾಗಲಿವೆ. ಇದರಲ್ಲಿ 38 ವಿಟಿಯು ಚಿನ್ನದ ಪದಕ ಹಾಗೂ 56 ದತ್ತಿ ನಿಧಿ ಚಿನ್ನದ ಪದಕಗಳಿವೆ. ಅಲ್ಲದೆ, 300 ವಿದ್ಯಾರ್ಥಿಗಳು ರ್ಯಾಂಕ್ ಪಡೆಯಲು ಅರ್ಹತೆ ಗಳಿಸಿದ್ದಾರೆ.
ವಿಶ್ವನಾಥ್‌ಗೆ 12 ಚಿನ್ನ:
ದಾವಣಗೆರೆಯ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಚ್.ಎಂ. ವಿಶ್ವನಾಥ್ ಅವರು 12 ಚಿನ್ನದ ಪದಕಗಳಿಗೆ ಅರ್ಹರಾಗಿದ್ದು, ಅತಿ ಹೆಚ್ಚು ಚಿನ್ನದ ಪದಕ ಪಡೆಯುವವರಾಗಿದ್ದಾರೆ.
ನಿಪ್ಪಾಣಿಯ ವಿಎಸ್ಎಂ ಸೋಮಶೇಖರ್ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಸಾಕ್ಷಿ ಎಸ್. ಹಡಲಗೆ 8 ಚಿನ್ನದ ಪದಕಗಳೊಂದಿಗೆ ಮುಂದಿನ ಸ್ಥಾನದಲ್ಲಿದ್ದಾರೆ. ಬೆಂಗಳೂರಿನ ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚಿನ್ಮಯಿ ಎಂ. ಕಶ್ಯಪ್ ಹಾಗೂ ಶಿವಮೊಗ್ಗದ ಜೆಎನ್ಎನ್ ಕಾಲೇಜ್ ಆಫ್ ಎಂಜಿನಿಯರಿಂಗ್ನ ಬಿ.ಎಂ. ಧನ್ಯಶ್ರೀ ತಲಾ 7 ಚಿನ್ನದ ಪದಕಗಳೊಂದಿಗೆ ಮುಂದಿನ ಸ್ಥಾನ ಹಂಚಿಕೊಂಡಿದ್ದಾರೆ. ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎ.ಸಿ. ಕವಿನಾ 6 ಚಿನ್ನದ ಪದಕಗಳಿಗೆ ಅರ್ಹರಾಗಿದ್ದಾರೆ.
ಈ ವೇಳೆ ವಿಟಿಯು ಕುಲಸಚಿವರು ಮೌಲ್ಯಮಾಪನ ಪ್ರೊ. ಯು.ಜೆ. ಉಜ್ವಲ್ ಹಾಗೂ ಕುಲಸಚಿವರು ಆಡಳಿತ ಪ್ರೊ. ಪ್ರಸಾದ ಬಿ. ರಾಂಪುರೆ ಸೇರಿದಂತೆ ವಿಟಿಯುನ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.



