September 24, 2026
Thursday, September 24, 2026
spot_img

ಉಪ್ಪಿಗೂ ಬಂತು ‘ವಾರ್ನಿಂಗ್‌’: ಆರೋಗ್ಯ ರಕ್ಷಣೆಗೆ ರಾಜ್ಯ ಸರ್ಕಾರದ ಹೊಸ ಪ್ರಯತ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತಿಯಾದ ಉಪ್ಪಿನ ಸೇವನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಇನ್ನು ಮುಂದೆ ಉಪ್ಪಿನ ಪ್ಯಾಕೆಟ್‌ಗಳ ಮೇಲೆಯೇ ಹೆಚ್ಚಿನ ಉಪ್ಪು ಸೇವನೆಯ ಅಪಾಯದ ಕುರಿತು ಎಚ್ಚರಿಕೆ ಸಂದೇಶ ಮುದ್ರಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ.

ಸಿಗರೇಟ್ ಪ್ಯಾಕೆಟ್‌ಗಳ ಮೇಲಿನ ಎಚ್ಚರಿಕೆ ಮಾದರಿಯಲ್ಲಿ ಈ ಲೇಬಲ್‌ಗಳನ್ನು ಅಳವಡಿಸುವ ಉದ್ದೇಶವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಉಪ್ಪಿನ ಜೊತೆಗೆ ಸಣ್ಣ ಚಮಚ

ಉಪ್ಪಿನ ಬಳಕೆಯನ್ನು ನಿಯಂತ್ರಿಸುವುದರ ಜತೆಗೆ ಆರೋಗ್ಯಕ್ಕೆ ಪೂರಕವಾಗಿರುವ ಉಪ್ಪಿನ ಉತ್ಪಾದನೆ ಮತ್ತು ಮಾರಾಟಕ್ಕೆ ನಿಯಮ ರೂಪಿಸುವ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ವಿಶೇಷವಾಗಿ ಫೋರ್ಟಿಫೈಡ್ ಉಪ್ಪಿನ ಬಳಕೆಗೆ ಒತ್ತು ನೀಡುವ ಚಿಂತನೆ ಇದೆ. ಜನರು ಅಳತೆ ಮಾಡದೆ ಉಪ್ಪು ಬಳಸುವ ಪ್ರವೃತ್ತಿ ಹೊಂದಿರುವುದರಿಂದ, ಪ್ಯಾಕೆಟ್‌ಗಳೊಂದಿಗೆ ನಿರ್ದಿಷ್ಟ ಪ್ರಮಾಣ ಸೂಚಿಸುವ ಸಣ್ಣ ಚಮಚವನ್ನೂ ನೀಡುವಂತೆ ಮಾಡುವ ಸಲಹೆಯನ್ನು ಸಚಿವರು ಮುಂದಿಟ್ಟಿದ್ದಾರೆ. ಇದರಿಂದ ದಿನನಿತ್ಯದ ಅಡುಗೆಯಲ್ಲಿ ಉಪ್ಪಿನ ಪ್ರಮಾಣವನ್ನು ನಿಯಂತ್ರಿಸಲು ನೆರವಾಗಬಹುದು ಎಂಬುದು ಸರ್ಕಾರದ ಉದ್ದೇಶ.

ಉಪ್ಪಿನ ಮೇಲೆ ಮಾತ್ರ ಎಚ್ಚರಿಕೆ ಲೇಬಲ್ ಸಾಕಾಗುತ್ತದೆಯೇ?

ಆದರೆ ಕೇವಲ ಉಪ್ಪಿನ ಪ್ಯಾಕೆಟ್‌ಗಳಿಗೆ ಎಚ್ಚರಿಕೆ ಲೇಬಲ್ ಅಳವಡಿಸುವುದರಿಂದ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗುವುದಿಲ್ಲ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳಿದ್ದಾರೆ. ವಿಶೇಷವಾಗಿ ಪ್ಯಾಕೇಜ್ಡ್ ಮತ್ತು ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳಲ್ಲಿ ಎಷ್ಟು ಉಪ್ಪಿದೆ ಎಂಬುದನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸುವ ಅಗತ್ಯವಿದೆ. ಉಪ್ಪಿನ ಜತೆಗೆ ಸಕ್ಕರೆ, ಎಣ್ಣೆ ಮತ್ತು ಟ್ರಾನ್ಸ್‌ಫ್ಯಾಟ್ ಪ್ರಮಾಣವನ್ನೂ ಪ್ಯಾಕೆಟ್‌ಗಳ ಮೇಲೆ ಸರಳವಾಗಿ ನಮೂದಿಸುವ ವ್ಯವಸ್ಥೆ ಜಾರಿಗೆ ಬರಬೇಕು.

ಇದನ್ನೂ ಓದಿ:

2030ರ ವೇಳೆಗೆ ಉಪ್ಪಿನ ಸೇವನೆ ಕಡಿಮೆ ಮಾಡುವ ಗುರಿ

ಕರ್ನಾಟಕ ಸರ್ಕಾರ ಈಗಾಗಲೇ 2030ರ ವೇಳೆಗೆ ಜನಸಂಖ್ಯೆಯ ಉಪ್ಪಿನ ಸೇವನೆಯನ್ನು ಶೇ.30ರಷ್ಟು ಕಡಿಮೆ ಮಾಡುವ ಗುರಿಯೊಂದಿಗೆ ರಾಜ್ಯಮಟ್ಟದ ಬಹು-ವಲಯ ಕಾರ್ಯಯೋಜನೆಯನ್ನು ಆರಂಭಿಸಿದೆ. ಮನೆಗಳಲ್ಲಿ ಮಾತ್ರವಲ್ಲದೆ ಹೊರಗಿನ ಆಹಾರ ಹಾಗೂ ಸಂಸ್ಕರಿತ ಆಹಾರಗಳಲ್ಲಿನ ಹೆಚ್ಚುವರಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಆಹಾರ ಪದ್ಧತಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವುದರಿಂದ, ಉಪ್ಪು ಕಡಿಮೆ ಮಾಡುವ ಸಲಹೆಯ ಜೊತೆಗೆ ಪರ್ಯಾಯ ಆಹಾರ ಕ್ರಮಗಳ ಬಗ್ಗೆಯೂ ಜನರಿಗೆ ಮಾರ್ಗದರ್ಶನ ನೀಡಬೇಕು ಎಂದು ತಜ್ಞರು ಹೇಳಿದ್ದಾರೆ.

Must Read