ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಾನಾ ಪಾಟೇಕರ್ ಅವರ ಅಸಾಧಾರಣ ನಟನಾ ಪ್ರತಿಭೆ, ಪ್ರಭಾವಶಾಲಿ ಪರದೆಯ ಸಾನ್ನಿಧ್ಯ ಹಾಗೂ ಹಲವು ಸ್ಮರಣೀಯ ಅಭಿನಯಗಳನ್ನು ನೆನಪಿಸಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಪಾಟೇಕರ್ ಅವರ ವ್ಯಕ್ತಿತ್ವದ ಮತ್ತೊಂದು ಪ್ರಮುಖ ಮುಖ ಅವರ ಸಾಮಾಜಿಕ ಕಾಳಜಿಯಾಗಿತ್ತು ಎಂದು ಸಿಎಂ ಡಿಕೆಶಿ ಹೇಳಿದ್ದಾರೆ. ವಿಶೇಷವಾಗಿ ರೈತರ ಬಗ್ಗೆ ಅವರು ಹೊಂದಿದ್ದ ಕಾಳಜಿ ಹಾಗೂ ಸಮಾಜ ಸೇವೆಯ ಮೇಲಿನ ಬದ್ಧತೆ ಅವರ ವ್ಯಕ್ತಿತ್ವದ ಆಳವನ್ನು ಪ್ರತಿಬಿಂಬಿಸುತ್ತಿತ್ತು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಟನೆಯಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದರು
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕೂಡ ನಾನಾ ಪಾಟೇಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಾನಾ ಪಾಟೇಕರ್ ಅವರ ಅಗಲಿಕೆಯ ಸುದ್ದಿ ಕೇಳಿ ತೀವ್ರ ದುಃಖವಾಯಿತು ಎಂದು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಸಂಭಾಷಣೆ ಹಾಗೂ ವಿಭಿನ್ನ ಅಭಿನಯದ ಮೂಲಕ ನಟರು ಮತ್ತು ಪ್ರೇಕ್ಷಕರ ನಡುವೆ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದರು ಎಂದು ಸ್ಮರಿಸಿದ್ದಾರೆ.
‘ಕ್ರಾಂತಿವೀರ’ ಹಾಗೂ ‘ನಟಸಮ್ರಾಟ್’ ಸೇರಿದಂತೆ ಹಲವು ಚಿತ್ರಗಳಲ್ಲಿನ ಪಾಟೇಕರ್ ಅವರ ಅಭಿನಯ ಸದಾ ಜನಮಾನಸದಲ್ಲಿ ಉಳಿಯಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಅವರು ಕೇವಲ ನಟರಾಗಿ ಮಾತ್ರ ಗುರುತಿಸಿಕೊಂಡಿರಲಿಲ್ಲ. ತಮ್ಮ ‘ನಾಮ್ ಫೌಂಡೇಷನ್’ ಮೂಲಕ ರೈತರು ಹಾಗೂ ಸಂಕಷ್ಟದಲ್ಲಿರುವವರ ನೆರವಿಗೆ ನಿಂತು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ನಾನಾ ಪಾಟೇಕರ್ ಅವರ ನಿಧನದಿಂದ ಭಾರತೀಯ ಚಿತ್ರರಂಗ ಒಬ್ಬ ಪ್ರತಿಭಾವಂತ ಹಾಗೂ ಸಂವೇದನಾಶೀಲ ನಟನನ್ನು ಕಳೆದುಕೊಂಡಿದೆ ಎಂದು ಬೊಮ್ಮಾಯಿ ವಿಷಾದಿಸಿದ್ದಾರೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.


