ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಕ್ರಿಕೆಟ್ ತಂಡದ ಪುರುಷರ ಆಯ್ಕೆ ಸಮಿತಿಗೆ ಹೊಸ ಅಧ್ಯಕ್ಷರ ನೇಮಕದ ಬಗ್ಗೆ ಸದ್ಯ ಯಾವುದೇ ಆತುರವಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.
ಹಾಲಿ ಮುಖ್ಯ ಆಯ್ಕೆಗಾರ ಅಜಿತ್ ಆಗರಕರ್ ಅವರ ಮೂರು ವರ್ಷದ ಅವಧಿ ಅಕ್ಟೋಬರ್ 4ರಂದು ಕೊನೆಗೊಳ್ಳಲಿದ್ದು, ಆ ಬಳಿಕವೇ ಮುಂದಿನ ಮುಖ್ಯ ಆಯ್ಕೆಗಾರರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಒಪ್ಪಂದ ಮುಂದುವರಿಸಲು ಇಷ್ಟ ಇಲ್ಲ
ಅಜಿತ್ ಆಗರಕರ್ ಅವರು ತಮ್ಮ ಒಪ್ಪಂದವನ್ನು ಮುಂದುವರಿಸಲು ಆಸಕ್ತಿ ಹೊಂದಿಲ್ಲ ಎಂಬುದನ್ನು ಸೆಪ್ಟೆಂಬರ್ 18ರಂದು ಬಿಸಿಸಿಐಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಪುರುಷರ ಹಿರಿಯ ಆಯ್ಕೆ ಸಮಿತಿಯ ಮುಂದಿನ ವ್ಯವಸ್ಥೆ ಕುರಿತು ನಿರ್ಧಾರ ಕೈಗೊಳ್ಳಲು ಮಂಡಳಿಯ ಪದಾಧಿಕಾರಿಗಳಿಗೆ ಅಧಿಕಾರ ನೀಡಲಾಗಿತ್ತು. ಆದರೆ, ಹೊಸ ಅಧ್ಯಕ್ಷರ ನೇಮಕಕ್ಕೆ ಈಗಲೇ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಸೈಕಿಯಾ ಹೇಳಿದ್ದಾರೆ.
ಇದನ್ನೂ ಓದಿ:
ಇನ್ನೂ ಸಾಕಷ್ಟು ಸಮಯ ಇದೆ
ಅಕ್ಟೋಬರ್ 4ರವರೆಗೆ ಬಿಸಿಸಿಐಗೆ ಸಾಕಷ್ಟು ಸಮಯವಿದ್ದು, ಆಗರಕರ್ ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಖಾಲಿಯಾಗುವ ಸ್ಥಾನಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನಿರ್ಧಾರ ಅಂತಿಮವಾದ ಬಳಿಕ ಅದನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು ಸೈಕಿಯಾ ತಿಳಿಸಿದ್ದಾರೆ.
2023ರ ಜುಲೈನಲ್ಲಿ ಚೇತನ್ ಶರ್ಮಾ ಅವರ ಬಳಿಕ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಆಗರಕರ್ ಅಧಿಕಾರ ವಹಿಸಿಕೊಂಡಿದ್ದರು. ಅವರ ಅವಧಿಯಲ್ಲಿ ಭಾರತ 2024ರ ಟಿ20 ವಿಶ್ವಕಪ್ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು.
ಆಗರಕರ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿರುವ ಬೆನ್ನಲ್ಲೇ ಬಿಸಿಸಿಐ ಮುಂದಿನ ಆಯ್ಕೆ ಸಮಿತಿಯ ನಾಯಕತ್ವದತ್ತ ಗಮನ ಹರಿಸಿದೆ. ಅಕ್ಟೋಬರ್ 4ರ ಬಳಿಕ ಹೊರಬೀಳಲಿರುವ ನಿರ್ಧಾರವು ಮುಂದಿನ ವಿಶ್ವಕಪ್ ಸೇರಿದಂತೆ ಭಾರತದ ಕ್ರಿಕೆಟ್ ಯೋಜನೆಗಳಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.



