ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಸರ್ಕಾರ ರಚನೆ ಸುತ್ತ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ನಡುವೆಯೇ, ಟಿವಿಕೆ ಮುಖ್ಯಸ್ಥ ವಿಜಯ್ ಅವರ ರಾಜಕೀಯ ಹೆಜ್ಜೆಗಳ ಬಗ್ಗೆ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಕಿಡಿಕಾರಿದ್ದಾರೆ.
ಸರ್ಕಾರ ರಚನೆಗೆ ಮುಂದಾಗುವ ಮೊದಲು ಅಗತ್ಯ ಸಂಖ್ಯಾಬಲವನ್ನು ಖಚಿತಪಡಿಸಿಕೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ಫಲಿತಾಂಶ ಹೊರಬಂದ ತಕ್ಷಣ ಏಕೈಕ ಅತಿ ದೊಡ್ಡ ಪಕ್ಷವಾಗಿ ವಿಜಯ್ ರಾಜ್ಯಪಾಲರನ್ನು ಭೇಟಿ ಮಾಡಿದ್ದರೆ ಪರಿಸ್ಥಿತಿ ಬೇರೆ ರೀತಿಯಲ್ಲಿರುತ್ತಿತ್ತು ಎಂದು ಇಳಂಗೋವನ್ ಹೇಳಿದ್ದಾರೆ. ಬಳಿಕ ಸದನದಲ್ಲಿ ಬಹುಮತ ಸಾಬೀತುಪಡಿಸುವ ಅವಕಾಶ ಸಿಗುತ್ತಿತ್ತು. ಆದರೆ ವಿವಿಧ ಪಕ್ಷಗಳ ಬೆಂಬಲದೊಂದಿಗೆ ಮುಂದಾಗಿರುವುದರಿಂದ ಈಗ ಸ್ಪಷ್ಟ ಬಹುಮತದ ಪ್ರಶ್ನೆ ಎದುರಾಗಿದೆ ಎಂದರು.
ಇದನ್ನೂ ಓದಿ:
ಇದೇ ವೇಳೆ, ಎಎಂಎಂಕೆ ಬೆಂಬಲದ ಪತ್ರದ ವಿಚಾರವನ್ನೂ ಅವರು ಪ್ರಸ್ತಾಪಿಸಿದರು. ಆರಂಭದಲ್ಲಿ ಎಎಂಎಂಕೆ ಬೆಂಬಲವಿದೆ ಎಂದು ಟಿವಿಕೆ ಹೇಳಿಕೊಂಡಿದ್ದರೂ, ಬಳಿಕ ಆ ಪಕ್ಷದ ನಾಯಕ ಟಿಟಿವಿ ದಿನಕರನ್ ಆ ಪತ್ರ ನಕಲಿ ಎಂದು ಆರೋಪಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಈ ಆರೋಪಗಳನ್ನು ಟಿವಿಕೆ ತಳ್ಳಿಹಾಕಿದ್ದು, ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಹಬ್ಬಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಆದರೆ, ಬೆಂಬಲವಿಲ್ಲದಿದ್ದರೆ ಅಂತಹ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸುವ ಅಗತ್ಯವೇನು ಎಂಬ ಪ್ರಶ್ನೆಯನ್ನು ಇಳಂಗೋವನ್ ಎತ್ತಿದ್ದಾರೆ. ಈ ವಿವಾದ ಈಗ ಮತ್ತಷ್ಟು ರಾಜಕೀಯ ಕಾವು ಹೆಚ್ಚಿಸಿದೆ.



