September 21, 2026
Monday, September 21, 2026
spot_img

‘ಸೌಹಾರ್ದತೆ’ ಬಗ್ಗೆ ಮಾತನಾಡುವ ಸಚಿವ ಖಾದರ್ ರಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಯಾಕೆ?: ಬಿಜೆಪಿ ಪ್ರಶ್ನೆ

ಹೊಸದಿಗಂತ ವರದಿ ಉಳ್ಳಾಲ:

ಸೌಹಾರ್ದತೆ ಬಗ್ಗೆ ಮಾತನಾಡುವ ಸಚಿವ ಯು.ಟಿ. ಖಾದರ್ ಅವರು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಳ್ಳಾಲಕ್ಕೆ ನೀಡಿದ 9 ಕೋಟಿ ಅನುದಾನದಲ್ಲಿ ಕೊಂಡಾಣ ಕ್ಷೇತ್ರಕ್ಕೆ ಮಾತ್ರ ಕೇವಲ 1 ಕೋಟಿ ಕೊಟ್ಟು, ಏಳು ಕೋಟಿಯನ್ನ ಒಂದೇ ಸಮುದಾಯಕ್ಕೆ ಇಟ್ಟು ಅನುದಾನದಲ್ಲಿ ತಾರತಮ್ಯ ಮಾಡಿದ್ದು ಯಾಕೆ ಎಂದು ಬಿಜೆಪಿ ಮಂಗಳೂರು ಮಂಡಲ ಪ್ರಶ್ನಿಸಿದೆ.

ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್. ಕೆ.ಆರ್., ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟದ ನಿರೀಕ್ಷೆಗಳ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರು ಮುಖ್ಯಮಂತ್ರಿಗಳಿಗೆ ಖುದ್ದಾಗಿ ಭೇಟಿ ಮಾಡಿ ಮನವರಿಕೆ ಮಾಡಿದ್ದರು. ಉಸ್ತುವಾರಿ ಸಚಿವ ಖಾದರ್ ಅವರು ಮುಖ್ಯಮಂತ್ರಿಗಳ ಜೊತೆಗೇ ತಿರುಗುವಾಗ ಉಳ್ಳಾಲ ಕ್ಷೇತ್ರಕ್ಕೆ ದೊಡ್ಡ ಅನುದಾನ ಬರುವ ನಿರೀಕ್ಷೆ ಕೂಡಾ ಎಲ್ಲರಲ್ಲೂ ಇತ್ತು. ಆದರೆ ಇದೀಗ ಅದೆಲ್ಲಾ ಸುಳ್ಳಾಗಿದೆ. ಖಾದರ್ ಅವರು ಅವರ ಸ್ವಕ್ಷೇತ್ರಕ್ಕೆ ಕೊಟ್ಟ ಕಾಣಿಕೆ ಶೂನ್ಯವಾಗಿದೆ ಎಂದು ಅವರು ಟೀಕಿಸಿದರು.

ಸಚಿವ ಖಾದರ್ ಅವರ ಸ್ವಕ್ಷೇತ್ರ ಉಳ್ಳಾಲವಿಡೀ ಕಸದ ರಾಶಿಯೇ ತುಂಬಿಕೊಂಡಿದೆ. ಆದರೆ ನಮ್ಮ ಶಾಸಕರಿಗೆ ಒಂದು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಸರಕಾರಿ ಭೂಮಿಯೇ ಸಿಕ್ಕಿಲ್ಲ. ಇದ್ದ ಸರಕಾರಿ ಭೂಮಿಗಳನ್ನ ಶಾಸಕರ ಆಪ್ತರೆನಿಸಿರುವ ಭೂಮಾಫಿಯಗಳು ಒತ್ತುವಾರಿ ನಡೆಸಿದ್ದಾರೆ. ಉಳ್ಳಾಲ ಮೊಗವೀರಪಟ್ಣದ ಮುಖ್ಯರಸ್ತೆ ಹದಗೆಡಲು ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಫಿಶ್ ಮೀಲ್ ಫ್ಯಾಕ್ಟರಿಗಳೇ ಕಾರಣವಾಗಿವೆ. ಸಚಿವ ಖಾದರ್ ಅವರು ಮುಖ್ಯಮಂತ್ರಿಗಳನ್ನ ಜಿಲ್ಲೆಗೆ ಕರೆಸಿ ಉಳ್ಳಾಲದಿಂದ ದಕ್ಕೆಯ ತನಕ ಸೇತುವೆ ನಿರ್ಮಿಸುವ ಬಗ್ಗೆ ತೋರಿಸಿದ್ದಾರೆ. ಅದೇ ರೀತಿ ಉಳ್ಳಾಲದ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗಳನ್ನು ಕೂಡಾ ಮುಖ್ಯಮಂತ್ರಿಗಳಿಗೆ ತೋರಿಸಬೇಕಿತ್ತು. ಅದನ್ನ ತೋರಿಸಿದರೆ ಶಾಸಕರ ಬಣ್ಣ ಬಯಲಾಗುತ್ತಿತ್ತು ಎಂದು ಅವರು ಲೇವಡಿ ಮಾಡಿದರು.

ಈ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗಳು ಯಾರ ಪಾಲುದಾರಿಕೆಯಲ್ಲಿ ನಡೆಯುತ್ತದೆಯೆಂಬುದೇ ಪ್ರಶ್ನಾರ್ಥಕವಾಗಿದೆ. ಖಾದರ್ ಅವರಿಗೆ ತಾಕತ್ತಿದ್ದರೆ ಅನಧಿಕೃತ ಫ್ಯಾಕ್ಟರಿಗಳನ್ನ ನಿಲ್ಲಿಸಲು ಆದೇಶ ಮಾಡಿಸಲಿ. ಇಲ್ಲಿ ಕೇವಲ ರಸ್ತೆ ದುರಸ್ಥಿಗೋಸ್ಕರ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸುವ ಅನಿವಾರ್ಯತೆ ಬಂದೊದಗಿದೆ. ಪ್ರವಾಸೋದ್ಯಮ ಉತ್ತೇಜನಕ್ಕೆ ಪ್ಯಾಕೇಜ್ ತರುತ್ತೇವೆನ್ನುವ ಖಾದರ್ ಅವರು ಮೊದಲು ತಮ್ಮ ಕ್ಷೇತ್ರದ ರಸ್ತೆಗಳನ್ನ ಸರಿಪಡಿಸಲಿ ಎಂದು ಮೋಹನ್ ರಾಜ್ ಆಗ್ರಹಿಸಿದರು.

ಇದನ್ನೂ ಓದಿ:

ಕೆಆರ್ ಡಿಎಲ್ ಲಂಚ ಪ್ರಕರಣ, ಉನ್ನತ ತನಿಖೆಯಾಗಲಿ

ಕೆಆರ್ ಡಿಎಲ್ ನಲ್ಲಿ ಸಚಿವರ ಹೆಸರು ಹೇಳಿ ಅಧಿಕಾರಿಗಳು ಲಂಚ ಕೇಳುತ್ತಾರೆಂದು ಕೈ ಶಾಸಕರಾದ ಅಶೋಕ್ ರೈ ಅವರೇ ಆರೋಪಿಸಿದ್ದರು. ಇದರ ಬಗ್ಗೆ ಸಮಗ್ರ ತನಿಖೆಗೆ ಸಚಿವ ಖಾದರ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಆದರೆ ಖಾದರ್ ಅವರು ಮೊನ್ನೆ ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ಯಾಕೆ ಮೌನವಾಗಿದ್ದರು? ಕೆಆರ್ ಡಿಎಲ್ ಲಂಚ ಪ್ರಕರಣವನ್ನು ಉನ್ನತ ತನಿಖೆಗೆ ಕೊಡಿ, ಆಗದಿದ್ದರೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಿ. ಅದರ ಬದಲಾಗಿ ನಮ್ಮ ಶಾಸಕರ ಧ್ವನಿ ಅಡಗಿಸುವ ಕೆಲಸ ಮಾಡಬೇಡಿಯೆಂದು ಮೋಹನ್ ರಾಜ್ ತಾಕೀತು ಮಾಡಿದರು.

ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ ಆಳ್ವ ಕುವೆತ್ತಬೈಲು ಮಾತನಾಡಿದರು. ಬಿಜೆಪಿ ಜಿಲ್ಲಾ ವಕ್ತಾರ ಜೀವನ್ ಕುಮಾರ್ ತೊಕ್ಕೊಟ್ಟು,ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಹಾಗೂ ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !