October 14, 2026
Wednesday, October 14, 2026
spot_img

ಕೆಜಿಎಫ್ ‘ರಾಕಿ ಭಾಯ್’ ಗೆಟಪ್‌ನಲ್ಲೇ ರಾವಣ? ‘ರಾಮಾಯಣ’ ಯಶ್ ಲುಕ್ ಬಗ್ಗೆ ಬಾಲಿವುಡ್ ನಟನ ಅಚ್ಚರಿಯ ಪ್ರಶ್ನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸುತ್ತಿದೆ. ಈ ಚಿತ್ರದಲ್ಲಿ ‘ರಾಕಿ ಭಾಯ್’ ನಟ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಆದರೆ, ಇದೀಗ ಬಾಲಿವುಡ್ ನಟ ಆರ್ಯ ಬಬ್ಬರ್ ಅವರು ಯಶ್ ಅವರ ರಾವಣನ ಗೆಟಪ್ ಕುರಿತು ಅಚ್ಚರಿಯ ಪ್ರಶ್ನೆಗಳನ್ನು ಎತ್ತುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಆರ್ಯ ಬಬ್ಬರ್, ಯಶ್ ಅವರ ರಾವಣನ ಪಾತ್ರದ ಗೆಟಪ್‌ನಲ್ಲಿ ಯಾವುದೇ ಹೊಸತನ ಕಾಣಿಸುತ್ತಿಲ್ಲ ಎಂದು ನೇರವಾಗಿ ಅಭಿಪ್ರಾಯಪಟ್ಟಿದ್ದಾರೆ. “ಯಶ್ ಅವರ ಮೇಕಪ್ ಮತ್ತು ಕಾಸ್ಟ್ಯೂಮ್ಸ್‌ಗಳನ್ನು ಹೊರತುಪಡಿಸಿದರೆ, ಅವರ ಮುಖದ ಗೆಟಪ್‌ನಲ್ಲಿ ಯಾವುದೇ ಬದಲಾವಣೆಯಿಲ್ಲ. ಕೆಜಿಎಫ್ ಸಿನಿಮಾದಲ್ಲಿ ನಾವು ಯಾವ ರೀತಿಯ ಗಡ್ಡ, ಮೀಸೆ ಮತ್ತು ಹೇರ್‌ಸ್ಟೈಲ್ ನೋಡಿದ್ದೆವೋ, ಅದೇ ಲುಕ್ ‘ರಾಮಾಯಣ’ದಲ್ಲೂ ಪುನರಾವರ್ತನೆಯಾಗಿದೆ” ಎಂದು ಅವರು ಹೇಳಿದ್ದಾರೆ.

ಓಮ್ ರಾವತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾ ಬಿಡುಗಡೆಯಾದಾಗ ಪಾತ್ರಗಳ ವಿಭಿನ್ನ ಚಿತ್ರಣದಿಂದಾಗಿ ತೀವ್ರ ವಿವಾದಕ್ಕೆ ಈಡಾಗಿತ್ತು. ವಿಶೇಷವಾಗಿ ಸೈಫ್ ಅಲಿ ಖಾನ್ ಮಾಡಿದ ರಾವಣನ ಲುಕ್ ತೀವ್ರ ಟೀಕೆಗೆ ಒಳಗಾಗಿತ್ತು. ಆದರೆ ಇದನ್ನು ಸಮರ್ಥಿಸಿಕೊಂಡ ಆರ್ಯ ಬಬ್ಬರ್, “ಆದಿಪುರುಷ್ ಚಿತ್ರದಲ್ಲಿ ಸೈಫ್ ಅಲಿ ಖಾನ್ ಅತ್ಯಂತ ಉತ್ತಮವಾಗಿ ನಟಿಸಿದ್ದರು. ನಿರ್ದೇಶಕರು ಅಂದುಕೊಂಡ ಕಲ್ಪನೆಗೆ ತಕ್ಕಂತೆ ನಟರು ಅಭಿನಯಿಸುತ್ತಾರೆಯೇ ಹೊರತು, ಇದರಲ್ಲಿ ನಟರ ಯಾವುದೇ ತಪ್ಪಿಲ್ಲ” ಎಂದು ಹೇಳಿದ್ದಾರೆ.

ಯಶ್ ಅವರ ಲುಕ್ ಬಗ್ಗೆ ಆಕ್ಷೇಪವೆತ್ತಿದರೂ, ಅವರ ಅಭಿನಯದ ಬಗ್ಗೆ ಆರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಸ್ಕ್ರೀನ್ ಮೇಲೆ ಯಶ್ ನಟನೆ ನೋಡಿದಾಗ ಖಂಡಿತವಾಗಿಯೂ ಸಂಪೂರ್ಣ ಭಿನ್ನವಾದ ಮತ್ತು ಅದ್ಭುತವಾದ ಅನುಭವ ಸಿಗಲಿದೆ” ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಾವು ರಂಗಭೂಮಿಯಲ್ಲಿ ಅಭಿನಯಿಸುತ್ತಿರುವ ರಾವಣನ ಪಾತ್ರಕ್ಕೂ, ಸಿನಿಮಾಗಳಲ್ಲಿ ಮೂಡಿಬರುವ ರಾವಣನ ಪಾತ್ರಗಳಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ತಿಳಿಸಿದ್ದಾರೆ.

Must Read