ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬಗಳ ಸಂಭ್ರಮದಲ್ಲಿ ಸಿಹಿ ಖರೀದಿಸುವ ಗ್ರಾಹಕರೇ ಎಚ್ಚರ! ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸಿಹಿ ತಯಾರಿಕಾ ಘಟಕಗಳು ಮತ್ತು ಮಾರಾಟ ಮಳಿಗೆಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ನಡೆಸಿದ್ದು, ನಿಯಮ ಉಲ್ಲಂಘಿಸಿದ 25 ಆಹಾರ ಉದ್ಯಮಗಳಿಗೆ ನೋಟಿಸ್ ನೀಡಿದ್ದಾರೆ.
ಎರಡು ದಿನಗಳ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 186 ಸ್ಥಳಗಳನ್ನು ಪರಿಶೀಲಿಸಲಾಗಿದ್ದು, ಇಬ್ಬರು ಉದ್ಯಮಿಗಳಿಗೆ ಒಟ್ಟು 7,000 ದಂಡ ವಿಧಿಸಲಾಗಿದೆ.
145 ಆಹಾರ ಮಾದರಿಗಳ ಸಂಗ್ರಹ
ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಸಿಹಿತಿಂಡಿಗಳ ಗುಣಮಟ್ಟ, ತಯಾರಿಕಾ ಪರಿಸರ ಹಾಗೂ ಆಹಾರ ಸುರಕ್ಷತಾ ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಈ ವಿಶೇಷ ತಪಾಸಣೆ ನಡೆಸುತ್ತಿದೆ. ಶುಕ್ರವಾರ ಕಾರ್ಯಾಚರಣೆಯ ಎರಡನೇ ದಿನ 106 ಘಟಕಗಳಿಗೆ ಭೇಟಿ ನೀಡಿ 145 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಎರಡು ದಿನಗಳಲ್ಲಿ ಒಟ್ಟು 270 ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಸ್ವಚ್ಛತೆ ಇಲ್ಲ, ಪರವಾನಗಿಯೂ ಇಲ್ಲ
ತಪಾಸಣೆಯ ವೇಳೆ ಆಹಾರ ತಯಾರಿಸುವ ಮತ್ತು ಸಂಗ್ರಹಿಸುವ ಸ್ಥಳಗಳಲ್ಲಿ ಸ್ವಚ್ಛತೆಯ ಕೊರತೆ, ಆಹಾರ ನಿರ್ವಹಿಸುವ ಸಿಬ್ಬಂದಿಯ ವೈದ್ಯಕೀಯ ಕ್ಷಮತಾ ಪ್ರಮಾಣಪತ್ರಗಳ ಅಭಾವ, ಅಗತ್ಯ ನೋಂದಣಿ ಅಥವಾ ಪರವಾನಗಿ ಇಲ್ಲದಿರುವುದು ಹಾಗೂ ಆಹಾರದ ಲೇಬಲ್ಗಳಲ್ಲಿ ದೋಷಗಳು ಕಂಡುಬಂದಿವೆ. ಕೆಲವು ಘಟಕಗಳಲ್ಲಿ ಅಗತ್ಯ ದಾಖಲೆಗಳನ್ನೂ ನಿರ್ವಹಿಸದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಇದನ್ನೂ ಓದಿ:
ಬಾಗಲಕೋಟೆಯ ವಲ್ಲಭಾಜಿ ಸ್ವೀಟ್ಸ್ನಲ್ಲಿ ಆಹಾರ ಸುರಕ್ಷತಾ ನೋಂದಣಿ ಪ್ರಮಾಣಪತ್ರ ಇಲ್ಲದಿರುವುದು ಪತ್ತೆಯಾಗಿದೆ. ಕಲಬುರಗಿಯ ಕಾಳಿ ಸ್ವೀಟ್ ಹೌಸ್ನಲ್ಲಿ ಸಿಬ್ಬಂದಿಯ ವೈದ್ಯಕೀಯ ಪ್ರಮಾಣಪತ್ರಗಳ ಕೊರತೆ ಕಂಡುಬಂದರೆ, ಶ್ರೀ ರಾಮ್ ಸ್ವೀಟ್ಸ್ ಮತ್ತು ಅಗರ್ವಾಲ್ ಸ್ವೀಟ್ಸ್ಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಉಲ್ಲಂಘನೆಗಳು ದಾಖಲಾಗಿವೆ. ರಾಯಚೂರಿನ ಸಾಯಿ ಸ್ವೀಟ್ಸ್ನಲ್ಲಿಯೂ ನೋಂದಣಿ ಇಲ್ಲದಿರುವುದು ಪತ್ತೆಯಾಗಿದೆ.
ಕೋಲಾರದ ನಹಾರ್ ಸ್ವೀಟ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್, ಬಾಲಾಜಿ ಸ್ವೀಟ್ಸ್ ಮತ್ತು ಗೋಲ್ಡ್ ಸ್ಟಾರ್ ಸ್ವೀಟ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್ಗಳಿಗೆ ಸ್ವಚ್ಛತೆಯ ಕೊರತೆಯ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಬಾಲಾಜಿ ಸ್ವೀಟ್ಸ್ಗೆ 2,000 ಹಾಗೂ ಗೋಲ್ಡ್ ಸ್ಟಾರ್ ಘಟಕಕ್ಕೆ 5,000 ದಂಡ ವಿಧಿಸಲಾಗಿದೆ.
ಬೆಂಗಳೂರಿನಿಂದ ಹುಬ್ಬಳ್ಳಿವರೆಗೂ ತಪಾಸಣೆ
ಬೆಂಗಳೂರು ನಗರ ವ್ಯಾಪ್ತಿಯ ಬಿಬಿಎಂಪಿ ಪಶ್ಚಿಮ, ಪೂರ್ವ ಮತ್ತು ದಕ್ಷಿಣ ವಲಯಗಳು ಸೇರಿದಂತೆ ಬಾಗಲಕೋಟೆ, ಕಲಬುರಗಿ, ರಾಯಚೂರು, ಕೋಲಾರ, ಕೊಪ್ಪಳ, ಕೊಡಗು, ಮೈಸೂರು ಗ್ರಾಮಾಂತರ, ಹಾಸನ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಪರಿಶೀಲನೆ ನಡೆದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ.
ಇಲಾಖೆಯು ರಾಜ್ಯಾದ್ಯಂತ ತಪಾಸಣೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.



