ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಅಕ್ವಾನ್’ ಚಂಡಮಾರುತ ಅಪ್ಪಳಿಸುವ ಭೀತಿಯ ಹಿನ್ನೆಲೆಯಲ್ಲಿ ಒಡಿಶಾದ ರಾಯಗಡ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಈಗಾಗಲೇ ಸುಮಾರು 2,000 ಜನರನ್ನು ಸುರಕ್ಷಿತವಾಗಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಶುತೋಷ್ ಕುಲಕರ್ಣಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಕುಲಕರ್ಣಿ, “ಗಂಜಾಂ-ಪುರಿ ಕರಾವಳಿಯಲ್ಲಿ ‘ಅಕ್ವಾನ್’ ಚಂಡಮಾರುತ ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿದ್ದು, ರಾಯಗಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೊನ್ನೆಯಿಂದಲೇ ನಮ್ಮ ಸಿದ್ಧತೆಗಳು ಆರಂಭವಾಗಿವೆ. ಜಿಲ್ಲೆಯಲ್ಲಿ 3 ಶಾಶ್ವತ ಹಾಗೂ 131 ತಾತ್ಕಾಲಿಕ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇದುವರೆಗೆ 2,000 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ” ಎಂದು ವಿವರಿಸಿದರು.
ಗುಡ್ಡಗಾಡು ಗ್ರಾಮಸ್ಥರು, ಗರ್ಭಿಣಿಯರ ಸುರಕ್ಷತೆಗೆ ಮೊದಲ ಆದ್ಯತೆ
ಭೂಕುಸಿತದ ಭೀತಿ ಇರುವ ಗುಡ್ಡಗಾಡು ಮತ್ತು ಇಳಿಜಾರು ಪ್ರದೇಶದ ಗ್ರಾಮಸ್ಥರು ಹಾಗೂ ವಂಶಧಾರಾ ನದಿ ಪಾತ್ರದ ಅಪಾಯಕಾರಿ ಹಳ್ಳಿಗಳ ಜನರನ್ನು ಮೊದಲ ಆದ್ಯತೆಯ ಮೇರೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ಗರ್ಭಿಣಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದ್ದು, ಸುಮಾರು 210 ಗರ್ಭಿಣಿಯರನ್ನು ಸುರಕ್ಷಿತ ಕೇಂದ್ರಗಳಿಗೆ ಕರೆತರಲಾಗಿದೆ. ಈ ಪೈಕಿ ಈಗಾಗಲೇ 50 ಮಂದಿಗೆ ಸುರಕ್ಷಿತ ಹೆರಿಗೆಯಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಎನ್‌ಡಿಆರ್‌ಎಫ್, 45 ಜೆಸಿಬಿಗಳು ಹೈ ಅಲರ್ಟ್
ತುರ್ತು ಪರಿಸ್ಥಿತಿ ಎದುರಿಸಲು ಜಿಲ್ಲೆಯಾದ್ಯಂತ ವಿಪತ್ತು ನಿರ್ವಹಣಾ ತಂಡಗಳನ್ನು ಸನ್ನದ್ಧವಾಗಿರಿಸಲಾಗಿದೆ. “3 ಒಡಿಆರ್‌ಎಎಫ್, 1 ಎನ್‌ಡಿಆರ್‌ಎಫ್ (NDRF) ಹಾಗೂ 11 ಅಗ್ನಿಶಾಮಕ ದಳದ ತಂಡಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ. ಭೂಕುಸಿತ ಸಂಭವಿಸಬಹುದಾದ ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 45 ಜೆಸಿಬಿ ಯಂತ್ರಗಳನ್ನು ಈಗಾಗಲೇ ನಿಯೋಜಿಸಲಾಗಿದೆ” ಎಂದು ಕುಲಕರ್ಣಿ ತಿಳಿಸಿದ್ದಾರೆ.
ಇದನ್ನೂ ಓದಿ:
ನಾಳೆ ಮಧ್ಯಾಹ್ನ ತೀರಕ್ಕೆ ಅಪ್ಪಳಿಸಲಿದೆ ಸೈಕ್ಲೋನ್
ಭಾರತೀಯ ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ‘ಅಕ್ವಾನ್’ ಚಂಡಮಾರುತವು ನವೆಂಬರ್ 20ರ ಮಧ್ಯಾಹ್ನದ ವೇಳೆಗೆ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯ ನರಸಾಪುರ ಮತ್ತು ಪುರಿ ನಡುವೆ ತೀರಕ್ಕೆ ಅಪ್ಪಳಿಸುವ ನಿರೀಕ್ಷೆಯಿದೆ. ಈ ವೇಳೆ ಗಂಟೆಗೆ 90 ರಿಂದ 100 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಈ ಕುರಿತು ಆಂಧ್ರಪ್ರದೇಶ ಹವಾಮಾನ ಇಲಾಖೆ ನಿರ್ದೇಶಕಿ ಕೆ. ನಾಗರತ್ನ ಮಾತನಾಡಿ, “ನವೆಂಬರ್ 20ರವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಉತ್ತರ ಕರಾವಳಿ ಆಂಧ್ರಪ್ರದೇಶದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದ್ದು, ಬಿರುಗಾಳಿಗೆ ಮರಗಳು ಹಾಗೂ ತಾತ್ಕಾಲಿಕ ಕಟ್ಟಡಗಳು ಧರೆಗುರುಳುವ ಸಂಭವವಿದೆ. ಹೀಗಾಗಿ ಕರಾವಳಿ ಭಾಗದ ಜನರು ಎಚ್ಚರಿಕೆಯಿಂದ ಇರಬೇಕು” ಎಂದು ಸೂಚಿಸಿದ್ದಾರೆ.



