April 12, 2026
Sunday, April 12, 2026
spot_img

ಪ್ರಧಾನಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದಾರೆ: ಸಂಸದ ಗೋವಿಂದ ಕಾರಜೋಳ

ಹೊಸದಿಗಂತ ವರದಿ ​ಚಿತ್ರದುರ್ಗ:

ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡಿ ಕೇಂದ್ರ ಸರ್ಕಾರದ ಸೌಲಭ್ಯಗಳು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಬೇಕೆಂದು ಸಂಸದ ಗೋವಿಂದ ಕಾರಜೋಳ ಕರೆ ನೀಡಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಚಿತ್ರದುರ್ಗ ಗ್ರಾಮಾಂತರ ಮಂಡಲ ವತಿಯಿಂದ ಭಾನುವಾರ ನಗರದ ಮುರುಘಾ ಮಠದಲ್ಲಿ ಹಮ್ಮಿಕೊಂಡಿದ್ದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರವರ ಜನ್ಮದಿನದ ಪ್ರಯುಕ್ತ ಪ್ರಶಿಕ್ಷಣ ಮಹಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರ ಇದುವರೆವಿಗೂ ಯಾವುದೇ ಹಗರಣ, ಭಷ್ಟಾಚಾರದಲ್ಲಿ ಸಿಲುಕಿಲ್ಲ. 11 ವರ್ಷಗಳ ಕಾಲ ದೇಶದ ಪ್ರಧಾನ ಮಂತ್ರಿಯಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದಾರೆ. ಇದಕ್ಕೂ ಮುನ್ನ ಗುಜರಾತ್ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದರು. ಆದರೆ ಇತರೆ ಪಕ್ಷಗಳಲ್ಲಿ ಹಗರಣಗಳ ಸರಮಾಲೆ ಕೊರಳಿಗೆ ಹಾಕಿಕೊಂಡಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾವುದೇ ಕಳಂಕ ಇಲ್ಲದಂತೆ ಅಧಿಕಾರ ನಡೆಸಲಾಗುತ್ತಿದೆ ಎಂದರು.

ನಮ್ಮ ಸರ್ಕಾರದ ಆಡಳಿತ ಹಾಗೂ ಸಾಧನೆ ಕುರಿತು ಮತದಾರರಿಗೆ ತಿಳಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ಆ ಮೂಲಕ ನಮ್ಮ ಪಕ್ಷದ ಘನತೆ ಹೆಚ್ಚಿಸಬೇಕಿದೆ. ಪ್ರಶಿಕ್ಷಣ ವರ್ಗದಲ್ಲಿ ತಿಳಿಸುವ ವಿಷಯಗಳನ್ನು ನಿಮ್ಮ ಬೂತ್‌ಗಳಲ್ಲಿ ಇತರರಿಗೆ ತಿಳಿಸುವ ಕಾರ್ಯ ಮಾಡಬೇಕು. ಸರ್ಕಾರದ ನೀತಿಗಳು ಪ್ರತಿಯೊಬ್ಬರಿಗೂ ತಿಳಿಯಬೇಕು. ನಮ್ಮ ಸರ್ಕಾರದ ಸಾಧನೆಯನ್ನು ಮತದಾರರಿಗೆ ತಿಳಿಸದೇ ಇದ್ದ ಕಾರಣ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಹಾಗೂ ತಿಪ್ಪಾರೆಡ್ಡಿಯವರು ಸೋಲಬೇಕಾಯಿತು ಎಂದು ಹೇಳಿದರು.

ಇದನ್ನೂ ಓದಿ:

ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಬಿಜೆಪಿ ಬೇರೆ ಪಕ್ಷದಂತೆ ಅಲ್ಲ. ಇದರಲ್ಲಿ ನಮ್ಮದೇ ಆದ ಸಿದ್ದಾಂತ ತತ್ವಗಳನ್ನು ಆಳವಡಿಕೆ ಮಾಡಲಾಗಿದೆ. ಪಕ್ಷವು ಅಧಿಕಾರಕ್ಕಿಂತ ದೇಶ ಮೊದಲು ಎಂಬ ಸಿದ್ದಾಂತ ಹೊಂದಿದೆ. 1980 ರಿಂದ ಜನ ಸಂಘವಾಗಿದ್ದ ಪಕ್ಷ ಬಿಜೆಪಿಯಾಗಿ ಮಾರ್ಪಾಡಾಗಿ ವಾಜಿಪೇಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಯಿತು. ಆರಂಭದಲ್ಲಿ ಕೇವಲ 2 ಸ್ಥಾನ ಗಳಿಸಿದ್ದ ಪಕ್ಷ ಈಗ ಮೂರನೇ ಬಾರಿಗೆ ಅಧಿಕಾರ ನಡೆಸುತ್ತಿದೆ. ಈ ಶಿಬಿರದಲ್ಲಿ 7 ವಿಷಯಗಳ ಬಗ್ಗೆ ತಿಳಿಸಲಾಗುತ್ತದೆ. ಅವನ್ನು ನಿಮ್ಮ ಬೂತ್‌ಗಳಲ್ಲಿ ಜನರಿಗೆ ತಿಳಿಸಬೇಕು. ಆ ಮೂಲಕ ಪಕ್ಷವನ್ನು ಸದೃಢಗೊಳಿಸಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಶಿಕ್ಷಣ ಮಹಾ ಆಭಿಯಾನ ಮಹತ್ವದ್ದಾಗಿದೆ. ಇದರಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ದೇಶದ ಪ್ರಧಾನ ಮಂತ್ರಿಯವರು ಸಹ ಭಾಗವಹಿಸುತ್ತಾರೆ. ಇದು ಪಕ್ಷದ ಆಗುಹೋಗುಗಳ ಬಗ್ಗೆ ತಿಳಿಯಲು ಸಹಕಾರಿಯಾಗುತ್ತದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತನನ್ನು ವ್ಯಕ್ತಿಯನ್ನಾಗಿ ಮಾಡುತ್ತದೆ. ಇಲ್ಲಿ ತಿಳಿಸುವ ವಿಷಯಗಳನ್ನು ಮನನ ಮಾಡಿಕೊಂಡು ಪಕ್ಷದ ಬೆಳವಣಿಗೆಗೆ ಶ್ರಮನಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಶಿಕ್ಷಣ ಅಭಿಯಾನದ ಜಿಲ್ಲಾ ಸಂಯೋಜಕರಾದ ಜಿ.ಎಚ್ ಮೋಹನ್‌ಕುಮಾರ್, ಮಾಜಿ ಅಧ್ಯಕ್ಷ ಟಿ.ಜಿ.ನರೇಂಧ್ರನಾಥ್, ಜಿಲ್ಲಾ ಉಪಾಧ್ಯಕ್ಷ ಡಾ.ಸಿದ್ಧಾರ್ಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗೀರೀಶ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಸಹ ವಕ್ತಾರ ನವೀನ್ ಚಾಲುಕ್ಯ, ಸಂಪತ್ ಕುಮಾರ್, ನಂದಿ ನಾಗರಾಜ್, ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ, ಪ್ರಧಾನ ಕಾರ್ಯದರ್ಶಿ ಶ್ವೇತಾ, ಬಸವರಾಜ್, ಶಿವಪ್ರಸಾದ್ ಸೇರಿದಂತೆ ನಗರ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಪ್ರಮುಖರು, ಶಕ್ತಿಕೇಂದ್ರ ಪ್ರಮುಖರು, ಬಿಎಲ್‌ಎ-2 ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !