ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಾಯಣ ಕುರಿತು ಮಾಡಿದ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ಹಿನ್ನೆಲೆಯಲ್ಲಿ ಅವರು ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿ, ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.
ಒಂದು ಸಾಹಿತ್ಯೋತ್ಸವದ ಚರ್ಚೆಯಲ್ಲಿ ‘ಕಲೆ ಮತ್ತು ಅದರ ಸ್ಥಿರತೆ’ ವಿಷಯದಡಿ ಮಾತನಾಡಿದ್ದ ವೇಳೆ ಹೇಳಿದ ಕೆಲ ಭಾಗಗಳನ್ನು ಕತ್ತರಿಸಿ ವೈರಲ್ ಮಾಡಲಾಗಿದೆ. ತಾನು ಶ್ರೀರಾಮ ಅಥವಾ ರಾಮಾಯಣವನ್ನು ಅವಮಾನಿಸುವ ಉದ್ದೇಶದಿಂದ ಮಾತನಾಡಿಲ್ಲ, ಎಲ್ಲ ಧರ್ಮಗಳನ್ನು ಗೌರವಿಸುವ ವ್ಯಕ್ತಿಯಾಗಿ ಯಾರ ಭಾವನೆಗೂ ಧಕ್ಕೆ ತರಲು ಇಚ್ಛಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:
ಆದರೆ ಧರ್ಮವನ್ನು ರಾಜಕೀಯ ಉದ್ದೇಶಕ್ಕೆ ಬಳಸುವವರು ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗದೆ, ತನ್ನನ್ನು ಹಿಂದೂ ವಿರೋಧಿ ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಪರೋಕ್ಷವಾಗಿ ಟೀಕಿಸಿದ್ದಾರೆ. ಈಗ ತಮಿಳುನಾಡು ಚುನಾವಣೆಯ ಬಳಿಕ ಸ್ವಲ್ಪ ಸಮಯ ವೈಯಕ್ತಿಕ ಕೆಲಸಗಳಲ್ಲಿ ತೊಡಗಿರುವುದಾಗಿ ಹೇಳಿದ ಅವರು, ಬಳಿಕ ಈ ವಿಷಯಕ್ಕೆ ವಿವರವಾದ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.
ಇನ್ನೊಂದೆಡೆ, ಈ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದು, ಕೆಲ ಸಂಘಟನೆಗಳು ಕಾನೂನು ಕ್ರಮಕ್ಕೆ ಒತ್ತಾಯಿಸಿವೆ. ಟಿಟಿಡಿ ಬೋರ್ಡ್ ಸದಸ್ಯರಿಂದ ನೋಟಿಸ್ ಜಾರಿಯಾಗಿರುವ ವರದಿಗಳೂ ಕೇಳಿಬರುತ್ತಿದೆ.



