ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ‘ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್’ ಎಂದೇ ಖ್ಯಾತರಾಗಿರುವ ಸೂಪರ್‌ಸ್ಟಾರ್ ಆಮೀರ್ ಖಾನ್, ಸಿನಿಮಾಗಳ ಸೋಲು ತಮ್ಮನ್ನು ಎಷ್ಟು ಬಾಧಿಸುತ್ತದೆ ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದಾಗಲೆಲ್ಲಾ ತಿಂಗಳುಗಳ ಕಾಲ ತೀವ್ರ ಮಾನಸಿಕ ಮತ್ತು ಭಾವುಕ ಸಂಕಷ್ಟದ ಹಂತಕ್ಕೆ ತಲುಪುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟ ಆಮೀರ್ ಖಾನ್, ಸಿನಿಮಾದ ತಿರಸ್ಕಾರವು ತಮಗೆ ವೈಯಕ್ತಿಕವಾಗಿ ದೊಡ್ಡ ಹೊಡೆತ ನೀಡುತ್ತದೆ. ಏಕೆಂದರೆ ಪ್ರತಿಯೊಂದು ಸಿನಿಮಾವನ್ನು ನಾವು ತಮ್ಮ ಸ್ವಂತ ಮಗುವಿನಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಸಿನಿಮಾ ಫ್ಲಾಪ್ ಆದಾಗ ಮಗುವನ್ನು ಕಳೆದುಕೊಂಡಂತೆ ಭಾಸವಾಗುತ್ತದೆ
ಸಿನಿಮಾದ ಸೋಲಿನ ಪರಿಣಾಮದ ಬಗ್ಗೆ ಮಾತನಾಡಿದ ಆಮೀರ್, “ಸಿನಿಮಾ ಫ್ಲಾಪ್ ಆದಾಗ ನನ್ನ ಹೃದಯ ಒಡೆಯುತ್ತದೆ. ದಿನದ ಕೊನೆಯಲ್ಲಿ ನಾವು ಪ್ರೇಕ್ಷಕರಿಗಾಗಿಯೇ ಸಿನಿಮಾ ಮಾಡುತ್ತೇವೆ. ಅವರು ಟಿಕೆಟ್ ಖರೀದಿಸಿ ಚಿತ್ರಮಂದಿರಕ್ಕೆ ಬಂದು ನೆಮ್ಮದಿಯಿಂದ ಸಮಯ ಕಳೆಯಲು ಬಯಸುತ್ತಾರೆ. ಆದರೆ ಅವರಿಗೆ ಸಿನಿಮಾ ಇಷ್ಟವಾಗದಿದ್ದರೆ, ನಮ್ಮ ಕೆಲಸದಲ್ಲಿ ಲೋಪವಿದೆ ಎಂದರ್ಥ. ಪ್ರೇಕ್ಷಕರು ಎಂದಿಗೂ ಬೇಕೆಂದೇ ಕೆಟ್ಟ ಸಿನಿಮಾ ನೋಡಲು ನಿರ್ಧರಿಸುವುದಿಲ್ಲ. ಅವರು ನಿರಾಶೆಗೊಂಡರೆ, ನಾವು ಎಲ್ಲೋ ತಪ್ಪು ಮಾಡಿದ್ದೇವೆ ಎಂದೇ ಅರ್ಥ” ಎಂದು ಹೇಳಿದ್ದಾರೆ.
ತಮ್ಮ ಸಿನಿಮಾಗಳು ಸೋತಾಗ ಕನಿಷ್ಠ 2 ರಿಂದ 3 ತಿಂಗಳು ತೀವ್ರ ಭಾವುಕ ಖಿನ್ನತೆಗೆ ಒಳಗಾಗುವುದಾಗಿ ಹೀಳಿಕೊಂಡಿರುವ ಅಮೀರ್ ಖಾನ್, ಈ ನೋವನ್ನು ತಡೆಯಲು ತಾವು ರೂಮಿನಲ್ಲಿ ಕುಳಿತು ಅಳುವುದಾಗಿ ಮತ್ತು ಮಗುವನ್ನು ಕಳೆದುಕೊಂಡಂತೆ ಶೋಕಿಸುತ್ತೇನೆ ಎಂದು ಮುಕ್ತವಾಗಿ ಹೇಳಿದ್ದಾರೆ. ಆ ಬೇಸರ ಮನಸ್ಸಿನಿಂದ ಸಂಪೂರ್ಣವಾಗಿ ಹೊರಹೋದ ನಂತರವಷ್ಟೇ, ತಮಗೆ ಮುಂದಿನ ಕೆಲಸ ಮಾಡಲು ಶಕ್ತಿ ಸಿಗುತ್ತದೆ ಎಂದು ಹಂಚಿಕೊಂಡಿದ್ದಾರೆ.
ಅದೇ ರೀತಿ, ಇತ್ತೀಚೆಗೆ ಮಗ ಜುನೈದ್ ಖಾನ್ ಹಾಗೂ ಸಾಯಿ ಪಲ್ಲವಿ ನಟನೆಯ ‘ಏಕ್ ದಿನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತಾಗ, ಆಮೀರ್‌ಗೆ ತೀವ್ರ ಆಘಾತವಾಗಿತ್ತು ಎಂದು ಅವರ ಮಗ ಸಂದರ್ಶನವೊಂದರಲ್ಲಿ ತಿಳಿಸಿದ್ದರು.



