July 8, 2026
Wednesday, July 8, 2026
spot_img

ಉಡುಪಿಯಲ್ಲಿ ಆಪರೇಷನ್ ಚಿಲ್ಡ್ರನ್ ಸೇಫ್ಟಿ: 203 ಶಾಲಾ ವಾಹನಗಳ ಮೇಲೆ ಪ್ರಕರಣ, 71 ಸಾವಿರ ರೂ. ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಲಾ ಮಕ್ಕಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಉಡುಪಿ ಜಿಲ್ಲಾ ಪೊಲೀಸರು ವಿಶೇಷ ತಪಾಸಣಾ ಕಾರ್ಯಾಚರಣೆ ಆರಂಭಿಸಿದ್ದು, ಸುರಕ್ಷತಾ ನಿಯಮ ಉಲ್ಲಂಘಿಸಿದ ಒಟ್ಟು 203 ಶಾಲಾ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ,ಬರೋಬ್ಬರಿ 71 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 483 ಶಾಲಾ ವಾಹನಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಕಾನೂನು ಉಲ್ಲಂಘನೆಯ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ಬಸ್‌ನ ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ 112 ಪ್ರಕರಣಗಳು, ಚಾಲಕರು ನಿಗದಿತ ಸಮವಸ್ತ್ರ ಧರಿಸದ 58 ಪ್ರಕರಣಗಳು, ಹಾಗೂ ಇತರೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ 33 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಪಾಸಣೆ ವೇಳೆ ಶಾಲಾ ಬಸ್‌ಗಳು, ವ್ಯಾನ್‌ಗಳು, ಆಟೋರಿಕ್ಷಾಗಳು ಸೇರಿದಂತೆ ವಿದ್ಯಾರ್ಥಿಗಳನ್ನು ಸಾಗಿಸುವ ಎಲ್ಲಾ ವಾಹನಗಳ ದಾಖಲೆಗಳನ್ನು ಪರಿಶೀಲಿಸಲಾಯಿತು. ವಾಹನಗಳ ಫಿಟ್‌ನೆಸ್ ಪ್ರಮಾಣಪತ್ರ, ವಿಮೆ, ಚಾಲನಾ ಪರವಾನಗಿ, ಶಾಲಾ ವಾಹನಗಳಿಗೆ ಕಡ್ಡಾಯವಾಗಿರುವ ಸುರಕ್ಷತಾ ನಿಯಮಗಳ ಪಾಲನೆ, ಅಗ್ನಿಶಾಮಕ ಉಪಕರಣ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತುರ್ತು ನಿರ್ಗಮನ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಮೋಟಾರು ವಾಹನ ಕಾಯ್ದೆಯಡಿ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:


ಶಾಲಾ ಆಡಳಿತ ಮಂಡಳಿ, ವಾಹನ ಮಾಲೀಕರು ಮತ್ತು ಚಾಲಕರು ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ಎಲ್ಲಾ ಕಡ್ಡಾಯ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉಡುಪಿ ಜಿಲ್ಲಾ ಪೊಲೀಸರು ಸ್ಪಷ್ಟ ಸೂಚನೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !