November 6, 2026
Friday, November 6, 2026
spot_img

ಕನ್ನಡದ ಹಿರಿಯ ಸಾಹಿತಿ, ಭಾಷಾತಜ್ಞ ಪ್ರೊ. ಕೆ.ವಿ. ನಾರಾಯಣ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡದ ಹಿರಿಯ ಚಿಂತಕ, ಭಾಷಾತಜ್ಞ, ವಿಮರ್ಶಕ ಪ್ರೊ. ಕೆ.ವಿ. ನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

76 ವರ್ಷದ ನಾರಾಯಣ ಅವರು ಯಲಹಂಕದಲ್ಲಿರುವ ತಮ್ಮ ಮನೆಯಲ್ಲಿ ಕುಳಿತಿದ್ದಾಗ ಹೃದಯಾಘಾತವಾಗಿದೆ. ಸ್ಥಳದಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾರಾಯಣ ಅವರ ಪುತ್ರಿ ಕೆನಡಾದಿಂದ ವಾಪಾಸಾಗಲು ಕುಟುಂಬದವರು ಕಾಯುತ್ತಿದ್ದಾರೆ. ನಾರಾಯಣ ಅವರು ಬದುಕಿರುವಾಗಲೇ ತಮ್ಮ ದೇಹವನ್ನು ಮೆಡಿಕಲ್‌ ಕಾಲೇಜಿಗೆ ದಾನ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೆಲ ವಿಧಿ ವಿಧಾನಗಳನ್ನು ನಡೆಸಿ ತದನಂತರ ಮೃತದೇಹವನ್ನು ಎಂಎಸ್‌ ರಾಮಯ್ಯ ಆಸ್ಪತ್ರೆಗೆ ನೀಡುವ ಸಾಧ್ಯತೆ ಇದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ 1948ರಲ್ಲಿ ಜನಿಸಿದ ಕೆ.ವಿ. ನಾರಾಯಣ ಅವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಖ್ಯಾತ ಸಾಹಿತಿ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಸಂಶೋಧನೆ ಪೂರ್ಣಗೊಳಿಸಿದರು.

ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಶೈಕ್ಷಣಿಕ ವೃತ್ತಿ ಆರಂಭಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಭಾಷಾವಿಜ್ಞಾನ ಮತ್ತು ಸಾಹಿತ್ಯ ಮೀಮಾಂಸೆಯ ಪ್ರಾಧ್ಯಾಪಕರಾಗಿ ದೀರ್ಘಕಾಲ ಬೋಧನೆ ಮಾಡಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾ ನಿಕಾಯದ ಡೀನ್, ಕುಲಸಚಿವ ಹಾಗೂ ಪ್ರಭಾರ ಕುಲಪತಿಯಂತಹ ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

ಕನ್ನಡ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಅನನ್ಯ ಸೇವೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವಗಳು ಇವರಿಗೆ ಸಂದಿವೆ.

Must Read