September 15, 2026
Tuesday, September 15, 2026
spot_img

ನೀಟ್ ಪೇಪರ್ ಲೀಕ್ ಹಗರಣ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳು ಮತ್ತು ಪೇಪರ್ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ (ಜುಲೈ 25, 2026) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಬೆನ್ನಲ್ಲೇ ತಮ್ಮ ಅಧಿಕೃತ ‘X’ ಖಾತೆಯಲ್ಲಿ ಸುದೀರ್ಘ ಹೇಳಿಕೆ ಹಂಚಿಕೊಂಡಿರುವ ಅವರು, “ಇದು ನನ್ನ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ಪತ್ರದಲ್ಲಿ ಧರ್ಮೇಂದ್ರ ಪ್ರಧಾನ್ ಹೇಳಿದ್ದೇನು?


“ನನ್ನ ಯುವ ಸ್ನೇಹಿತರೇ, ಕಳೆದ ನಾಲ್ಕು ದಶಕಗಳಿಂದ ನಾನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸುಧಾರಣೆಗಳಿಗಾಗಿ ನನ್ನನ್ನು ಮುಡುಪಾಗಿಟ್ಟಿದ್ದೇನೆ. ಭಾರತದ ಯುವ ಪೀಳಿಗೆಯ ಕನಸುಗಳನ್ನು ನನಸು ಮಾಡುವುದು ನಮ್ಮ ರಾಜಕೀಯ ಮತ್ತು ಸಾಮಾಜಿಕ ಜೀವನದ ನೈತಿಕ ಬದ್ಧತೆಯಾಗಿದೆ.

ಮೇ 3, 2026 ರಂದು ನಡೆದ NEET-UG ಪರೀಕ್ಷೆಯಲ್ಲಿ ಕೆಲವು ಅಕ್ರಮಗಳು ಬೆಳಕಿಗೆ ಬಂದ ತಕ್ಷಣ, ಭಾರತ ಸರ್ಕಾರವು ತನಿಖೆಯನ್ನು ಸಿಬಿಐಗೆ ಒಪ್ಪಿಸಿತು, ಪರೀಕ್ಷೆಯನ್ನು ರದ್ದುಗೊಳಿಸಿತು ಮತ್ತು ಮರು-ಪರೀಕ್ಷೆಯ ದಿನಾಂಕವನ್ನು ಘೋಷಿಸಿತು. ಅಷ್ಟೇ ಅಲ್ಲದೆ, ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ (CBT) ಮೋಡ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ನಾನು ಮೊದಲ ದಿನದಿಂದಲೇ ಇದರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದೇನೆ ಮತ್ತು ಪರಿಸ್ಥಿತಿಯಿಂದ ಎಂದಿಗೂ ಮುಖತಿರುಗಿಸಿಲ್ಲ. ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯವನ್ನು ‘ಪರೀಕ್ಷಾ ಮಾಫಿಯಾ’ ಹಾಳುಮಾಡಲು ನಾನು ಬಿಡುವುದಿಲ್ಲ.

ದೇಶವಿರೋಧಿ ಶಕ್ತಿಗಳಿಗೆ ಅವಕಾಶ ನೀಡಲ್ಲ:
ಜಂತರ್ ಮಂತರ್‌ನಲ್ಲಿ ಹಾಗೂ ದೇಶಾದ್ಯಂತ ಇರುವ ಸದ್ಯದ ಪರಿಸ್ಥಿತಿಯ ಲಾಭವನ್ನು ದೇಶವಿರೋಧಿ ಶಕ್ತಿಗಳು ಪಡೆಯಬಾರದು. ದೇಶವು ಒಗ್ಗಟ್ಟಿನಿಂದ ಇರಬೇಕು. ಭಾರತದ ವಿದ್ಯಾರ್ಥಿಗಳು ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಳ್ಳದೆ ತಮ್ಮ ಅಧ್ಯಯನ ಮತ್ತು ವೃತ್ತಿಜೀವನದ ಮೇಲೆ ಗಮನ ಹರಿಸಬೇಕು ಎಂಬ ಕಾರಣಕ್ಕಾಗಿ ನಾನು ಪ್ರಧಾನಮಂತ್ರಿಯವರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ” ಎಂದು ಪ್ರಧಾನ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:

ವಿದ್ಯಾರ್ಥಿ ಶಕ್ತಿಗೆ ಸಂದ ಜಯ ಎಂದ ‘ಸಿಜೆಪಿ’:

ಶಿಕ್ಷಣ ಸಚಿವರ ರಾಜೀನಾಮೆ ನೀಡಲು ಕಾಮನ್‌ಮ್ಯಾನ್ ಜಂಟಾ ಪಾರ್ಟಿ (CJP) ನೀಡಿದ್ದ ಗಡುವು ಇಂದು ಮಧ್ಯಾಹ್ನ ಅಂತ್ಯಗೊಂಡಿತ್ತು. ಪ್ರಧಾನ್ ಅವರ ರಾಜೀನಾಮೆ ನಿರ್ಧಾರ ಹೊರಬೀಳುತ್ತಿದ್ದಂತೆ ‘X’ ನಲ್ಲಿ ಪ್ರತಿಕ್ರಿಯಿಸಿರುವ ಸಿಜೆಪಿ, “ಶಿಕ್ಷಣ ಸಚಿವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ, ವಿದ್ಯಾರ್ಥಿ ಶಕ್ತಿಗೆ ಜಯವಾಗಲಿ” ಎಂದು ಹರ್ಷ ವ್ಯಕ್ತಪಡಿಸಿದೆ.

ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಜೆಪಿ ವಕ್ತಾರ ಅಶುತೋಷ್ ರಾಂಕಾ, “ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್‌ರೊಂದಿಗಿನ ಭೇಟಿ ಫಲಪ್ರದವಾಗಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಷಯದಲ್ಲಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದ ನಂತರ ಸಿಜೆಪಿ ತನ್ನ ಮುಂದಿನ ನಡೆಯನ್ನು ನಿರ್ಧರಿಸಲಿದೆ” ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !