September 3, 2026
Thursday, September 3, 2026
spot_img

ಕುತ್ತಾರು ಸೌಹಾರ್ದ ವೃತ್ತ: ದೈವಾರಾಧಕರು, ಭಕ್ತರಲ್ಲಿ ಸಚಿವ ಖಾದರ್ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

ಹೊಸದಿಗಂತ ವರದಿ ಉಳ್ಳಾಲ:

ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರಿನ ನೂತನ ವೃತ್ತದಲ್ಲಿ ಕೊರಗಜ್ಜನ ಹೆಸರು ಹಾಕಿ ದಂಟೆ ಮುಟ್ಟಾಳೆಯ ಪ್ರತಿಕೃತಿಯನ್ನ ಅಳವಡಿಸಿ, ಅದಕ್ಕೆ ಸೌಹಾರ್ದ ವೃತ್ತವೆಂದು ಇನ್ನೊಂದು ಹೆಸರಿಟ್ಟದ್ದಲ್ಲದೆ, ಸಚಿವ ಖಾದರ್ ಅವರು ಅದನ್ನ ರಾತೋ ರಾತ್ರಿ ಬಂದು ಉದ್ಘಾಟಿಸುವ ಉದ್ಧೇಶವೇನೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್.ಕೆ.ಆರ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:

ವೃತ್ತದಲ್ಲಿ ದೈವದ ಹೆಸರು ಹಾಕಿ, ದಂಟೆ ಮುಟ್ಟಾಳೆ ಇಟ್ಟ ಬಳಿಕ ಹಿಂದು ಧರ್ಮದ ಪದ್ಧತಿ ಪ್ರಕಾರ ಅದಕ್ಕೆ ಗೌರವ ನೀಡುವ ಕಾರ್ಯ ನಡೆಸಬೇಕಿತ್ತು. ಅದನ್ನ ಬಿಟ್ಟು ಏಕಾ ಏಕಿ ಬಂದು ಮ್ಯೂಸಿಯಮ್ ನಂತೆ ಉದ್ಘಾಟಿಸಿ ಇಡೀ ದೈವಾರಾಧಕರು ಹಾಗೂ ಭಕ್ತರ ಮನಸ್ಸಿಗೆ ನೋವು ಉಂಟು ಮಾಡಿರುವುದು ಖಂಡನೀಯ. ಸಚಿವ ಖಾದರ್ ಅವರು ಕೂಡಲೇ ದೈವಾರಾಧಕರು ಮತ್ತು ಭಕ್ತರಲ್ಲಿ ಕ್ಷಮೆ ಯಾಚಿಸಬೇಕು. ಜನರ ಭಾವನೆಗಳ ಜೊತೆ ಆಟವಾಡಿ ರಾಜಕೀಯ ಬೇಳೆ ಬೇಯಿಸಬಹುದೆಂಬ ಯೋಚನೆ ಖಾದರ್ ಅವರ ತಲೆಯಲ್ಲಿರಬಹುದು. ಆದರೆ ಅದು ಖಂಡಿತ ನೆರವೇರಲು ಸಾಧ್ಯವಿಲ್ಲ. ಎಲ್ಲರ ಭಾವನೆಗೆ ಗೌರವ ಕೊಡುವ ಕೆಲಸ ಮಾಡಬೇಕೇ ಹೊರತು ಕೀಳು ಮಟ್ಟದ ರಾಜಕೀಯವನ್ನು ಸಚಿವರು ಮಾಡಬಾರದೆಂದು‌ ಮೋಹನ್ ರಾಜ್ ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !