September 27, 2026
Sunday, September 27, 2026
spot_img

‘ಭಯೋತ್ಪಾದನೆಗೆ ಭಾರತದ ಖಡಕ್ ಸಂದೇಶ’: ಮನ್ ಕಿ ಬಾತ್‌ನಲ್ಲಿ 2016ರ ಸರ್ಜಿಕಲ್ ಸ್ಟ್ರೈಕ್ ಸಾಹಸ ನೆನೆದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ʼಭಾರತದ ಮೇಲೆ ಯಾರಾದರೂ ವಕ್ರದೃಷ್ಟಿ ಬೀರಿದರೆ ಅವರಿಗೆ ತಕ್ಕ ಪ್ರತ್ಯುತ್ತರ ಸಿಗಲಿದೆ ಎಂಬುದನ್ನು ನಮ್ಮ ದೇಶ ಜಗತ್ತಿಗೆ ಸ್ಪಷ್ಟಪಡಿಸಿದೆʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶದ ರಕ್ಷಣಾ ಪಡೆಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2016ರಲ್ಲಿ ಭಾರತೀಯ ಸೇನೆ ನಡೆಸಿದ ಐತಿಹಾಸಿಕ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯನ್ನು ನೆನಪಿಸಿಕೊಂಡಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಸಾಹಸಕ್ಕೆ ಹತ್ತು ವರ್ಷಗಳ ಸಂಭ್ರಮ

2016ರ ಸೆ. 28-29ರಂದು ಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆಯನ್ನು (LoC) ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ನಡೆಸಿದ ನಿಖರ ದಾಳಿಗೆ ಈಗ ಹತ್ತು ವರ್ಷ ತುಂಬುತ್ತಿದೆ.  ಈ ಕಾರ್ಯಾಚರಣೆಯ ಮೂಲಕ ಭಾರತವು ಗಡಿಯಾಚೆಗಿನ ಭಯೋತ್ಪಾದನೆಗೆ ತಕ್ಷಣವೇ ತಿರುಗೇಟು ನೀಡಬಲ್ಲದು ಎಂಬುದನ್ನು ಇಡೀ ಜಗತ್ತಿಗೆ ಸಾಬೀತುಪಡಿಸಿತು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಬಾಲಾಕೋಟ್, ಆಪರೇಷನ್ ಸಿಂಧೂರ್ ಉಲ್ಲೇಖ

ಭಯೋತ್ಪಾದನೆ ವಿರುದ್ಧದ ಭಾರತದ ರಾಜಿಯಿಲ್ಲದ ನೀತಿಯನ್ನು ವಿವರಿಸಿದ ಪ್ರಧಾನಿ, ಕಳೆದ ಒಂದು ದಶಕದಲ್ಲಿ ನಡೆಸಲಾದ ಬಾಲಾಕೋಟ್ ವೈಮಾನಿಕ ದಾಳಿ ಹಾಗೂ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಗಳನ್ನು ಪ್ರಸ್ತಾಪಿಸಿದರು. ದೇಶದ ಶಾಂತಿಗೆ ಧಕ್ಕೆ ತರಲು ಯತ್ನಿಸುವ ಶಕ್ತಿಗಳಿಗೆ ಭಾರತದ ರಕ್ಷಣಾ ಪಡೆಗಳು ಎಂದಿಗೂ ಕ್ಷಮಿಸುವುದಿಲ್ಲ ಎಂಬ ಖಡಕ್‌ ಸಂದೇಶವನ್ನು ಈ ಕಾರ್ಯಾಚರಣೆಗಳು ರವಾನಿಸಿವೆ ಎಂದರು.

ಇದನ್ನೂ ಓದಿ:

ಜನಗಣತಿ ಪ್ರತಿಯೊಬ್ಬರ ರಾಷ್ಟ್ರೀಯ ಜವಾಬ್ದಾರಿ

ಇದೇ ವೇಳೆ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಜನಗಣತಿ ಪ್ರಕ್ರಿಯೆಯ ಬಗ್ಗೆಯೂ ಮಾತನಾಡಿದ ಪ್ರಧಾನಿ ಮೋದಿ, ಜನಗಣತಿಯು ಕೇವಲ ಸರ್ಕಾರದ ಕೆಲಸವಲ್ಲ, ಇದು ಒಂದು ಮಹತ್ವದ ರಾಷ್ಟ್ರೀಯ ಜವಾಬ್ದಾರಿಯಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಪಾತ್ರವನ್ನು ನಿರ್ವಹಿಸಬೇಕು ಎಂದು ದೇಶದ ಜನತೆಗೆ ಕರೆ ನೀಡಿದರು.

Must Read