October 10, 2026
Saturday, October 10, 2026
spot_img

ನಟ ದಿಲೀಪ್ ರಾಜ್ ಅಂತಿಮ ಯಾತ್ರೆ: ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಅಂತ್ಯಸಂಸ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆಯು ರಾಮನಗರ ತಾಲೂಕಿನ ಗುನ್ನೂರು ಗ್ರಾಮದ ಬಳಿ ಇರುವ ಅವರ ಸ್ವಂತ ಫಾರ್ಮ್‌ಹೌಸ್‌ನಲ್ಲಿ ಬುಧವಾರ ನೆರವೇರಿತು. ಇತ್ತೀಚೆಗಷ್ಟೇ ಹೃದಯಾಘಾತದಿಂದ ನಿಧನರಾಗಿದ್ದ ಅವರ ಪಾರ್ಥಿವ ಶರೀರಕ್ಕೆ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ಪೂರೈಸಲಾಯಿತು.

ದಿಲೀಪ್ ರಾಜ್ ಅವರಿಗೆ ತಾವು ನಿರ್ಮಿಸಿಕೊಂಡಿದ್ದ ರಾಮನಗರದ ತೋಟದ ಮನೆಯೆಂದರೆ ಅತೀವ ಪ್ರೀತಿ. ಬಿಡುವಿನ ವೇಳೆಯಲ್ಲಿ ಅಲ್ಲಿನ ಹಳೇ ಶೈಲಿಯ ‘ತೊಟ್ಟಿ ಮನೆ’ಯಲ್ಲಿ ಕಾಲ ಕಳೆಯಲು ಅವರು ಇಷ್ಟಪಡುತ್ತಿದ್ದರು. ಸ್ಥಳೀಯ ಗ್ರಾಮಸ್ಥರೊಂದಿಗೆ ಅತ್ಯಂತ ಆಪ್ತವಾಗಿ ಗುರುತಿಸಿಕೊಂಡಿದ್ದ ನಟನ ಆಸೆಯಂತೆಯೇ, ಅದೇ ಫಾರ್ಮ್‌ಹೌಸ್‌ನಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದರು.

ಅಂತ್ಯಕ್ರಿಯೆಯ ಮುನ್ನ ರೇವಣಸಿದ್ದೇಶ್ವರ ಮಠದ ಶ್ರೀ ರಾಜಶೇಖರ ಸ್ವಾಮೀಜಿಗಳ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು. ದಿಲೀಪ್ ರಾಜ್ ಅವರ ಅಣ್ಣನ ಮಗ ಧಾರ್ಮಿಕ ವಿಧಿಗಳನ್ನು ಪೂರೈಸಿದರು.

ಅಂತಿಮ ದರ್ಶನದಲ್ಲಿ ಸ್ಯಾಂಡಲ್‌ವುಡ್ ಮತ್ತು ಕಿರುತೆರೆಯ ಖ್ಯಾತ ನಟರಾದ ಸೃಜನ್ ಲೋಕೇಶ್, ಅನು ಪ್ರಭಾಕರ್, ರಘು ಮುಖರ್ಜಿ, ಮಂಜು ಪಾವಗಡ, ಜಗಪ್ಪ, ಹುಲಿ ಕಾರ್ತಿಕ್ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡು ತಮ್ಮ ಗೆಳೆಯನಿಗೆ ವಿದಾಯ ಹೇಳಿದರು. ಈ ವೇಳೆ ದಿಲೀಪ್ ರಾಜ್ ಅವರ ಪತ್ನಿ ಮತ್ತು ಮಕ್ಕಳ ಆಕ್ರಂದನ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು. ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಗಲಿದ ನಟನಿಗೆ ಗೌರವ ಸಲ್ಲಿಸಿದರು.

Must Read