ಇಂದಿನ ವೇಗದ ಡಿಜಿಟಲ್ ಜಗತ್ತಿನಲ್ಲಿ ಬಿಡುವಿಲ್ಲದ ಕೆಲಸದ ವೇಳಾಪಟ್ಟಿ ಮತ್ತು ಸ್ಕ್ರೀನ್ ಟೈಮ್ ನಮ್ಮನ್ನು ಕುಟುಂಬದಿಂದ ದೂರ ತಳ್ಳುತ್ತಿದೆ. ಒಂದೇ ಸೂರಿನಡಿ ವಾಸಿಸುತ್ತಿದ್ದರೂ ಸದಸ್ಯರು ತಮ್ಮದೇ ಆದ ಪ್ರತ್ಯೇಕ ಲೋಕದಲ್ಲಿ ಮುಳುಗಿರುತ್ತಾರೆ. ಆದರೆ, ಕುಟುಂಬದ ನೆಮ್ಮದಿ ಮತ್ತು ಭದ್ರತೆಯೇ ನಮ್ಮ ನಿಜವಾದ ಆಸ್ತಿ. ನಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಕುಟುಂಬದಲ್ಲಿ ಕಳೆದುಹೋಗುತ್ತಿರುವ ಮಧುರ ಬಾಂಧವ್ಯವನ್ನು ಮರಳಿ ಪಡೆಯಬಹುದು. ನಿಮ್ಮ ಹೆತ್ತವರು, ಸಂಗಾತಿ ಮತ್ತು ಮಕ್ಕಳ ಜೊತೆಗಿನ ಪ್ರೀತಿಯ ಒಡನಾಟವನ್ನು ಗಟ್ಟಿಗೊಳಿಸಲು ಅನುಸರಿಸಬೇಕಾದ 5 ಪ್ರಮುಖ ಮಾರ್ಗಗಳು ಇಲ್ಲಿದೆ.
ಎಲ್ಲರು ಒಟ್ಟಿಗೆ ಊಟ ಮಾಡುವ ಅಭ್ಯಾಸ
ದಿನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿ. ಆ ಸಮಯದಲ್ಲಿ ಮೊಬೈಲ್, ಟಿವಿ ಅಥವಾ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸಬಾರದು. ಇದು ಎಲ್ಲರೂ ಮುಖಾಮುಖಿಯಾಗಿ ಮಾತನಾಡಲು ಮತ್ತು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರತಿದಿನ ಒಂದು ಉತ್ತಮ ಅವಕಾಶವನ್ನು ನೀಡುತ್ತದೆ.
ವಾರಕ್ಕೊಮ್ಮೆ ‘ಫ್ಯಾಮಿಲಿ ಟೈಮ್’ ಫಿಕ್ಸ್ ಮಾಡುವುದು
ಪ್ರತಿ ವಾರ ಅಥವಾ ತಿಂಗಳಿಗೊಮ್ಮೆ ಇಡೀ ಕುಟುಂಬ ಒಟ್ಟಾಗಿ ಆಚರಿಸುವ ಒಂದು ಸಣ್ಣ ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕು. ಉದಾಹರಣೆಗೆ: ಭಾನುವಾರ ಬೆಳಗಿನ ವಾಕಿಂಗ್, ಶುಕ್ರವಾರ ರಾತ್ರಿ ಒಟ್ಟಿಗೆ ಕೂತು ಕ್ಯಾರಂ ಅಥವಾ ಚೆಸ್ ಆಡುವುದು, ಅಥವಾ ತಿಂಗಳಿಗೊಮ್ಮೆ ಹತ್ತಿರದ ದೇವಸ್ಥಾನ ಅಥವಾ ಪ್ರವಾಸಿ ತಾಣಕ್ಕೆ ಭೇಟಿ ನೀಡುವುದು. ಇದು ಕುಟುಂಬದಲ್ಲಿ ಸ್ಥಿರತೆ ಮತ್ತು ಸಂತೋಷವನ್ನು ತರುತ್ತದೆ.
ಇದನ್ನೂ ಓದಿ:
ವೈಯಕ್ತಿಕವಾಗಿ ಸಮಯ ಕಳೆಯುವುದು
ಕುಟುಂಬದ ಎಲ್ಲರ ಜೊತೆ ಒಟ್ಟಿಗೆ ಸಮಯ ಕಳೆಯುವುದು ಎಷ್ಟು ಮುಖ್ಯವೋ, ಪ್ರತಿಯೊಬ್ಬ ಸದಸ್ಯರ ಜೊತೆ ವೈಯಕ್ತಿಕವಾಗಿ ಮಾತನಾಡುವುದು ಅಷ್ಟೇ ಮುಖ್ಯ. ವಾರದಲ್ಲಿ ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ನಿಮ್ಮ ಸಂಗಾತಿ, ಮಕ್ಕಳು ಅಥವಾ ಪೋಷಕರ ಜೊತೆ ಪ್ರತ್ಯೇಕವಾಗಿ ಕುಳಿತು ಮಾತನಾಡಬೇಕು. ಅವರ ಮನಸ್ಸಿನ ಆಸೆ, ಆತಂಕ ಅಥವಾ ಆಸಕ್ತಿಗಳನ್ನು ಕೇಳಿ ತಿಳಿಯಬೇಕು. ಇದು ಅವರಲ್ಲಿ ಭರವಸೆಯನ್ನು ಮೂಡಿಸುತ್ತದೆ.
ವಾರಕ್ಕೊಮ್ಮೆ ‘ಫ್ಯಾಮಿಲಿ ಮೀಟಿಂಗ್’ ನಡೆಸುವುದು
ಪ್ರತಿ ವಾರಾಂತ್ಯದಲ್ಲಿ 15 ನಿಮಿಷಗಳ ಕಾಲ ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡುವುದು. ಮೀಟಿಂಗ್ ಆರಂಭಿಸುವಾಗ ಪ್ರತಿ ಸದಸ್ಯರು ಮನೆಯ ಮತ್ತೊಬ್ಬ ಸದಸ್ಯರ ಒಳ್ಳೆಯ ಗುಣ ಅಥವಾ ಸಹಾಯವನ್ನು ಶ್ಲಾಘಿಸಿ ಇದು ಮನೆಯಲ್ಲಿ ಕೃತಜ್ಞತಾ ಭಾವವನ್ನು ಮೂಡಿಸುತ್ತದೆ ಹಾಗೂ ಮನಸ್ತಾಪಗಳಿದ್ದರೆ ಅವುಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಒಟ್ಟಾಗಿ ಹೊಸ ವಿಷಯಗಳನ್ನು ಕಲಿಯುವುದು
ಇಡೀ ಕುಟುಂಬ ಜೊತೆಯಾಗಿ ಒಂದು ಹೊಸ ಕೆಲಸ ಅಥವಾ ಹವ್ಯಾಸವನ್ನು ಕಲಿಯಲು ಪ್ರಯತ್ನಿಸಿವುದು. ಉದಾಹರಣೆಗೆ: ಹೊಸದೊಂದು ಅಡುಗೆಯನ್ನು ಒಟ್ಟಾಗಿ ಮಾಡುವುದು, ಗಿಡಗಳನ್ನು ನೆಡುವುದು ಅಥವಾ ಹೊಸದೊಂದು ಭಾಷೆ ಅಥವಾ ಕಲೆಯನ್ನು ಕಲಿಯುವುದು. ಒಟ್ಟಿಗೆ ಹೊಸ ಸವಾಲುಗಳನ್ನು ಎದುರಿಸುವಾಗ ಕುಟುಂಬದ ಬಾಂಡಿಂಗ್ ಮತ್ತಷ್ಟು ಗಟ್ಟಿಯಾಗುತ್ತದೆ.



