September 26, 2026
Saturday, September 26, 2026
spot_img

ಏಷ್ಯನ್ ಗೇಮ್ಸ್: ಇರಾನ್ ವಿರುದ್ಧ ರೋಚಕ ಗೆಲುವು: ಭಾರತದ ಮಹಿಳಾ ಕಬಡ್ಡಿ ತಂಡಕ್ಕೆ ಚಿನ್ನದ ಸಂಭ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರಿದಿದ್ದು, ಮಹಿಳಾ ಕಬಡ್ಡಿ ವಿಭಾಗದಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಲಭಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಇರಾನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ವನಿತೆಯರು 37-34 ಅಂಕಗಳ ಅಂತರದಿಂದ ರೋಚಕ ಜಯ ಸಾಧಿಸಿದ್ದಾರೆ. ಈ ಮೂಲಕ ಈ ಹಿಂದೆ ಹ್ಯಾಂಗ್‌ಝೌನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನ ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.

ಪಂದ್ಯದುದ್ದಕ್ಕೂ ಇರಾನ್ ತಂಡ ಭಾರತಕ್ಕೆ ಪ್ರಬಲ ಪೈಪೋಟಿ ನೀಡುತ್ತಾ ಕಂಬ್ಯಾಕ್ ಮಾಡಲು ತೀವ್ರ ಹೋರಾಟ ನಡೆಸಿತು. ಪಂದ್ಯ ಮುಗಿಯಲು ಕೇವಲ ಒಂದು ನಿಮಿಷ ಬಾಕಿ ಇರುವಾಗ ಇರಾನ್ ತಂಡಕ್ಕೆ ಅಂಕಗಳ ತುರ್ತು ಅಗತ್ಯವಿತ್ತು. ಆದರೆ ಈ ಒತ್ತಡದ ಸಮಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಡಿಫೆಂಡರ್‌ಗಳು, ಇರಾನ್‌ನ ಸ್ಟಾರ್ ರೈಡರ್ ಐನಾಜ್ ಅವರನ್ನು ‘ಸೂಪರ್ ಟ್ಯಾಕಲ್’ ಮಾಡುವ ಮೂಲಕ ಭಾರತದ ಗೆಲುವನ್ನು ಅಧಿಕೃತವಾಗಿ ಖಚಿತಪಡಿಸಿದರು. ಇಡೀ ಟೂರ್ನಿಯುದ್ದಕ್ಕೂ ಭಾರತದ ಪರ ಅತ್ಯುತ್ತಮ ಆಟ ಪ್ರದರ್ಶಿಸಿದ್ದ ಸಂಜು ದೇವಿ, ಈ ನಿರ್ಣಾಯಕ ಫೈನಲ್ ಪಂದ್ಯದಲ್ಲೂ ಜವಾಬ್ದಾರಿಯುತ ಆಟವಾಡಿ ಭಾರತದ ಸ್ಕೋರ್ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸಿದರು.

ಭಾರತದ ಪದಕಗಳ ಪಟ್ಟಿ 27ಕ್ಕೆ ಏರಿಕೆ

ಈ ಬಂಗಾರದ ಪದಕದ ಸೇರ್ಪಡೆಯೊಂದಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 27ಕ್ಕೆ ತಲುಪಿದ್ದು, ಭಾರತ ಸದ್ಯ ಪದಕಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ. ಚಾಂಪಿಯನ್ಸ್ ತಂಡದಲ್ಲಿ ಪೂಜಾ, ರಾಜ್ ರಾಣಿ, ಸೋನಾಲಿ ವಿಷ್ಣು, ಪುಷ್ಪಾ, ಭಾವನಾ ದೇವಿ, ರಿತು, ಸಂಜು ದೇವಿ, ರಿತು ನೇಗಿ, ಮನಿಷಾ ಕುಮಾರಿ, ಪಿಂಕಿ ರಾಯ್, ಜ್ಯೋತಿ ಮತ್ತು ನಿಕಿತಾ ಇದ್ದಾರೆ.

ಇದನ್ನೂ ಓದಿ:

ಇಂದು ಸಂಜೆ ಪುರುಷರ ಕಬಡ್ಡಿ ಫೈನಲ್ ಪಂದ್ಯವೂ ನಡೆಯಲಿದ್ದು, ಅಲ್ಲಿಯೂ ಭಾರತದ ಪುರುಷರ ತಂಡ ಚಿನ್ನದ ಪದಕಕ್ಕಾಗಿ ಇರಾನ್ ವಿರುದ್ಧವೇ ಸೆಣಸಾಡಲಿದ್ದು ಭಾರಿ ಕುತೂಹಲ ಮೂಡಿಸಿದೆ.

Must Read