ಹೊಸದಿಗಂತ ವರದಿ ಬಳ್ಳಾರಿ:
ಬಳ್ಳಾರಿ: ಪ್ರಸಕ್ತ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಅನ್ನದಾತರ ಗೋಳು ಹೇಳತೀರದಾಗಿದೆ. ಕೂಡಲೇ ರಾಜ್ಯ ಸರ್ಕಾರ ಬರ ಘೋಷಣೆ ಮಾಡಬೇಕು, ಪ್ರತಿ ಎಕರೆಗೆ 50 ಸಾವಿರ ರೈತರಿಗೆ ಪರಿಹಾರ ನೀಡಬೇಕು, ವಿಳಂಬ ಮಾಡಿದರೆ, ಬೆಳೆಗಳು ಹಾನಿಗೀಡಾದ ಜಮೀನಿನಲ್ಲೇ ಆ.3 ರಿಂದ ಬಿಜೆಪಿ ವತಿಯಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಎಚ್ಚರಿಸಿದರು. ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ವರ್ಷ ಭೀಕರ ಬರ ಆವರಿಸಿದ ಹಿನ್ನೆಲೆ ಕುಡಿವ ನೀರಿನ ಸಮಸ್ಯೆ ಎದುರಾಗಿದೆ, ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಜಾನುವಾರುಗಳಿಗೆ ಮೇವಿಲ್ಲ, ನೀರಿಲ್ಲ, ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
10 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಜಿಲ್ಲೆಯಲ್ಲಿ ಬರದ ಛಾಯೆ ತಾಂಡವಾಡುತ್ತಿದೆ, ಶೇ.80 ರಷ್ಟು ಬಿತ್ತಿದ ಮೆಕ್ಕೆಜೋಳ, ಹತ್ತಿ, ಜೋಳ ಸೇರಿ ನಾನಾ ಬೆಳೆಗಳು ಸಂಪೂರ್ಣ ನಾಶವಾಗಿವೆ. ಜಿಲ್ಲೆಯಲ್ಲಿ ಶೇ.38 ರಷ್ಟು ಮಾತ್ರ ಬಿತ್ತನೆಯಾಗಿದೆ, 50 ದಿನ ಕಳೆದರು ಭೂಮಿಯಿಂದ 1 ಅಡಿ ಮಾತ್ರ ಬೆಳೆದಿವೆ, ಸದ್ಯ ಮಳೆ ಸುರಿದರೂ ಬೆಳೆ ಬರದ ಸ್ಥಿತಿಯಿದೆ. ನೀರಿಲ್ಲದೇ ಬಿರುಕು ಭೂಮಿಯಲ್ಲಿ ರೈತರು ಆಕಾಶ ನೋಡುತ್ತಾ ಕಣ್ಣಿರಿಡುತ್ತಿದ್ದಾರೆ. ಹೀಗಿರುವಾಗ ಜಿಲ್ಲೆಯ 5 ಕಾಂಗ್ರೆಸ್ ಶಾಸಕರಲ್ಲಿ 4 ಜನ ಶಾಸಕರು ಮಂತ್ರಿಗಿರಿಗಾಗಿ ದೆಹಲಿಯಲ್ಲಿ ಬಿಡು ಬಿಟ್ಟಿದ್ದಾರೆ. ರೈತರ ಬಗ್ಗೆ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ, ಹೊರತು, ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದೆ, ಈ ಹಿನ್ನೆಲೆ ಬರ ಘೋಷಣೆ ಮಾಡಲು ಹಿಂದೂ ಮುಂದೆ ನೋಡುತ್ತಿದೆ. ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ. ಅಬಕಾರಿ ಇಲಾಖೆ ಬಿಟ್ಟರೆ ಬೇರೆ ಯಾವುದರಿಂದಲೂ ಸರ್ಕಾರಕ್ಕೆ ಹಣ ಬರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ;
ಮಿಸ್ಟರ್ ಡಿ.ಕೆ.ಶಿವಕುಮಾರ್ ಸಿ.ಎಂ.ಆಗಿ 2 ತಿಂಗಳು ಕಳೆದಿದ್ದು, ರಾಜ್ಯದ ಎಲ್ಲ ಜಲಾಶಯಗಳು ಖಾಲಿ ಖಾಲಿ, ಬರ ಹಿನ್ನೆಲೆ ರೈತರ ಜಮೀನು ಖಾಲಿ ಖಾಲಿ. ಆದರೆ, ದೆಹಲಿಯಲ್ಲಿ ಜಾಲಿ ಜಾಲಿ ಟ್ರಿಪ್ ಹೊಡೆತಿದ್ದಾರೆ. ಯಾರೇ ಇರಲಿ ಸಿ.ಎಂ.ಆದಮೇಲೆ ಹೊಸ ಘೋಷಣೆ ಮಾಡ್ತಾರೆ ಎನ್ನುವ ನಿರೀಕ್ಷೆ ಜನರಲ್ಲಿರಲಿದೆ. ಡಿ.ಕೆ.ಸಿ.ಎಂ. ಆದ್ಮೇಲೆ ರಾಜ್ಯಕ್ಕೆ ಯಾವುದೇ ಒಳ್ಳೆಯದಾಗಿಲ್ಲ. ಎಚ್. ಡಿ.ಕುಮಾರಸ್ವಾಮಿ ಅವರು ಸಿ.ಎಂ.ಆದ ಕೂಡಲೇ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ರು, ಬಿ.ಎಸ್.ಯಡಿಯೂರಪ್ಪ ಅವರು ಸಿ.ಎಂ.ಆದ ಕೂಡಲೇ ನೆರೆ ಪರಿಹಾರಕ್ಕೆ ಸಾವಿರಾರು ಕೋಟಿ ಅನುದಾನ ತಂದರು. ಡಿ.ಕೆ. ಬಂದ್ರು ಎಲ್ಲ ಓಕೆ ಆಗುತ್ತೆ ಅಂದ್ರು, ಆದ್ರೆ, ಅದು ಯಾವುದು ಆಗ್ಲಿಲ್ಲ ಎಂದು ವಾಗ್ದಾಳಿ ನಡೆಸಿದರು.



