ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ರಸ್ತೆ ಗುಂಡಿಗಳ ಸಮಸ್ಯೆ ಮತ್ತೆ ಚರ್ಚೆಗೆ ಕಾರಣವಾಗಿದ್ದು, ಈ ಬಾರಿ ವಿಭಿನ್ನ ಪ್ರಯತ್ನವೊಂದು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಉದ್ಯಮಿ ಅಖಿಲ್ ಹೇಮಾದ್ರಿ ತಮ್ಮ ಐಷಾರಾಮಿ ಪೋರ್ಷೆ ಕಾರಿನ ಸಹಾಯದಿಂದ ರಸ್ತೆ ಗುಂಡಿ ಮುಚ್ಚಿದ ವಿಡಿಯೋ ಇದೀಗ ವೈರಲ್ ಆಗಿದೆ.
ವಿಡಿಯೋದಲ್ಲಿ, ಅವರು ಕಾರಿನ ಬಾನೆಟ್ ಮೇಲೆಯೇ ಸಿಮೆಂಟ್ ಮತ್ತು ಜಲ್ಲಿ ಮಿಶ್ರಣ ತಯಾರಿಸಿ, ಬಳಿಕ ಅದನ್ನು ಗುಂಡಿಗೆ ಸುರಿದು ತಾತ್ಕಾಲಿಕ ದುರಸ್ತಿ ಮಾಡುವ ದೃಶ್ಯ ಕಾಣಿಸುತ್ತದೆ. ಕೋಟಿ ಮೌಲ್ಯದ ಕಾರನ್ನು ಈ ರೀತಿಯಾಗಿ ಬಳಸಿರುವುದು ನೆಟ್ಟಿಗರಲ್ಲಿ ಆಶ್ಚರ್ಯ ಮೂಡಿಸಿದೆ.
ಈ ಕುರಿತು ಮಾತನಾಡಿರುವ ಅವರು, ಜನಸಂಖ್ಯೆ ಹೆಚ್ಚಿರುವ ದೇಶದಲ್ಲಿ ಸಾರ್ವಜನಿಕ ಸ್ಥಳಗಳ ನಿರ್ವಹಣೆಗೆ ನಾಗರಿಕರೂ ಹೊಣೆಗಾರರು ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಮೇಲೆಯೇ ಸಂಪೂರ್ಣ ಅವಲಂಬನೆ ಇರಬಾರದು ಎಂಬ ಸಂದೇಶ ನೀಡಲು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:
ಇನ್ನೊಂದೆಡೆ, ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನಾಗರಿಕ ಜವಾಬ್ದಾರಿಯ ಉದಾಹರಣೆ ಎಂದು ಪ್ರಶಂಸಿಸಿದರೆ, ಮತ್ತೂ ಕೆಲವರು ಇದು ಕೇವಲ ಪ್ರಚಾರಕ್ಕಾಗಿ ರೂಪಿಸಿದ ವಿಡಿಯೋ ಎಂದು ಟೀಕಿಸಿದ್ದಾರೆ. ವಿಶೇಷವಾಗಿ, ಕಾರಿನ ಬಾನೆಟ್ ಮೇಲೆ ರಕ್ಷಣಾತ್ಮಕ ಪದರ ಬಳಸಿ ಮಿಶ್ರಣ ಮಾಡಿರುವುದರಿಂದ ಇದು ಯೋಜಿತ ಚಿತ್ರೀಕರಣ ಎಂಬ ಅನುಮಾನವೂ ವ್ಯಕ್ತವಾಗಿದೆ.
ಒಟ್ಟಿನಲ್ಲಿ, ರಸ್ತೆ ಸಮಸ್ಯೆಯತ್ತ ಗಮನ ಸೆಳೆಯುವ ಪ್ರಯತ್ನವೋ ಅಥವಾ ಪ್ರಚಾರ ತಂತ್ರವೋ ಎಂಬ ಚರ್ಚೆ ಇದೀಗ ಜೋರಾಗಿದೆ.



