June 15, 2026
Monday, June 15, 2026
spot_img

ಕಲ್ಲಂಗಡಿ ಹಣ್ಣಿನಲ್ಲಿ ರಾಸಾಯನಿಕ ಶಂಕೆ? ಹಣ್ಣು ತಿಂದ ತಂದೆ ಸಾವು, ಮಗನ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಧ್ಯಪ್ರದೇಶದ ಶಿಯೋಪುರ್‌ನಲ್ಲಿ ಕಲ್ಲಂಗಡಿ ಹಣ್ಣು ಸೇವಿಸಿದ ಬೆನ್ನಲ್ಲೇ ತಂದೆ ಸಾವನ್ನಪ್ಪಿದ್ದು, ಮಗನ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಶಾಜಾಪುರ ಜಿಲ್ಲೆಯ ನಿವಾಸಿಯಾಗಿದ್ದ 43 ವರ್ಷದ ಇಂದ್ರ ಕುಮಾರ್ ಪರಿಹಾರ್ ಮೃತ ತಂದೆ. ಶಿಯೋಪುರ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಇವರು ತಮ್ಮ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕುಟುಂಬಸ್ಥರು ನೀಡಿದ ಮಾಹಿತಿಯ ಪ್ರಕಾರ, ಇಂದ್ರ ಕುಮಾರ್ ಮತ್ತು ಅವರ 21 ವರ್ಷದ ಮಗ ವಿನೋದ್ ಗುರುವಾರ ರಾತ್ರಿ ಅಸ್ವಸ್ಥರಾಗಿದ್ದರು. ಶುಕ್ರವಾರ ಬೆಳಗ್ಗೆ ಇಬ್ಬರೂ ಮನೆಯಲ್ಲಿ ಕಲ್ಲಂಗಡಿ ಹಣ್ಣು ತಿಂದಿದ್ದಾರೆ. ಅದರ ಬೆನ್ನಲ್ಲೇ ಇಬ್ಬರ ಆರೋಗ್ಯವೂ ತೀವ್ರವಾಗಿ ಕ್ಷೀಣಿಸಿದೆ.

ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಂದೆ ಮತ್ತು ಮಗನನ್ನು ಶಿಯೋಪುರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂದ್ರ ಕುಮಾರ್ ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ವೈದ್ಯರು ಅವರನ್ನು ಕೋಟಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದ್ದರು. ಆದರೆ ಅವರು ಹೋಗುವ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಮಗ ವಿನೋದ್ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ.

ಇಂದ್ರ ಕುಮಾರ್ ಪರಿಹಾರ್ , ಪತ್ನಿ ಸಂಗೀತಾ, ಮಕ್ಕಳಾದ ವಿನೋದ್, ರಾಜಾ ಮತ್ತು ದೇವ ಹಾಗೂ ಅವರೊಂದಿಗೆ ವಾಸಿಸುತ್ತಿದ್ದ ಮತ್ತೊಬ್ಬ ಕುಟುಂಬದ ಸದಸ್ಯೆ ರಾಧಿಕಾ ಅವರನ್ನು ಅಗಲಿದ್ದಾರೆ.

ಈ ಬಗ್ಗೆ ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಆರ್. ಬಿ. ಗೋಯಲ್ ಮಾತನಾಡಿ, ಶುಕ್ರವಾರ ಬೆಳಗ್ಗೆ ಇಬ್ಬರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಲ್ಲಂಗಡಿ ಹಣ್ಣು ಸೇವನೆಯಿಂದಲೇ ಸಾವು ಸಂಭವಿಸಿದೆ ಎಂದು ಖಚಿತಪಡಿಸಿಲ್ಲ ಮತ್ತು ರೋಗಿಗಳು ಹೊಟ್ಟೆಯ ಸೋಂಕಿನಿಂದ ಬಳಲುತ್ತಿರಬಹುದು. ಇನ್ನು ವೈದ್ಯಕೀಯ ತಪಾಸಣೆ ನಡೆಯುತ್ತಿದ್ದು, ಆ ವರದಿಗಳು ಬಂದ ನಂತರವಷ್ಟೇ ನಿಖರವಾದ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.

ಈ ಘಟನೆಯು ಹಣ್ಣಿನಲ್ಲಿ ವಿಷಕಾರಿ ಪದಾರ್ಥಗಳು ಅಥವಾ ರಾಸಾಯನಿಕಗಳ ಇರುವಿಕೆಯ ಸಾಧ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಮೂಡಿಸಿದೆ. ಆದಾಗ್ಯೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರವಾದ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬೆನ್ನಲ್ಲೇ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಈ ಕುರಿತು ತನಿಖೆ ಆರಂಭಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !