August 23, 2026
Sunday, August 23, 2026
spot_img

CINE | ಹೈದರಾಬಾದ್‌ನಲ್ಲಿ ಯಶ್‌ಗೆ ಭರ್ಜರಿ ಸ್ವಾಗತ: ‘ಟಾಕ್ಸಿಕ್’ ಪ್ರೀ-ರಿಲೀಸ್‌ನಲ್ಲಿ ‘ರಾಯ’ನ ಪವರ್‌ಫುಲ್ ಸ್ಪೀಚ್ ಕೇಳಿದ್ರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಟಾಕ್ಸಿಕ್’ ಸಿನಿಮಾ ನೋಡೋದಕ್ಕೆ ಯಾರು ರೆಡಿ ಇಲ್ಲ ಹೇಳಿ. ಯಶ್ ನ ಮಾಸ್ ಅವತಾರ ನೋಡುವುದೇ ಅಭಿಮಾನಿಗಳಿಗೆ ಹಬ್ಬ. ಈ ಹಬ್ಬ ಮಾಡೋದಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಹೈದರಾಬಾದ್ ನಲ್ಲಿ ಫಿಲಂನ ಪ್ರೀ-ರಿಲೀಸ್‌ ಕಾರ್ಯಕ್ರಮ ಭರ್ಜರಿಯಾಗಿ ನಡೆದಿದೆ.

ಆಗಸ್ಟ್ 22ರಂದು ಮಲ್ಲಾ ರೆಡ್ಡಿ ಯೂನಿವರ್ಸಿಟಿ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗಿದ್ದು, ತೆಲುಗು ರಾಜ್ಯಗಳಲ್ಲಿ ಯಶ್‌ಗಿರುವ ಜನಪ್ರಿಯತೆ ಮತ್ತೊಮ್ಮೆ ಸಾಬೀತಾಗಿದೆ.

ಕನ್ನಡದ ನಮಸ್ಕಾರದೊಂದಿಗೆ ಮಾತು ಆರಂಭಿಸಿದ ‘ರಾಯ’

ಕಾರ್ಯಕ್ರಮದಲ್ಲಿ ಯಶ್‌ ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿ, ಬಳಿಕ ತೆಲುಗು ಮತ್ತು ಇಂಗ್ಲಿಷ್ ಭಾಷೆಗಳನ್ನೂ ಬೆರೆಸಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ತೆಲುಗು ಪ್ರೇಕ್ಷಕರು ಭಾಷೆ, ಹಿನ್ನೆಲೆ ಅಥವಾ ಯಾವುದೇ ಭೇದಭಾವ ನೋಡದೆ ಉತ್ತಮ ಸಿನಿಮಾಗಳನ್ನು ಸದಾ ಬೆಂಬಲಿಸಿದ್ದಾರೆ ಎಂದು ಯಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿಯ ಬೆಂಬಲ ಭಾರತೀಯ ಚಿತ್ರರಂಗದ ಬೆಳವಣಿಗೆಗೆ ಅಗತ್ಯ ಎಂದು ಹೇಳಿದರು.

ಭಾರತೀಯ ಸಿನಿಮಾಗೆ ಒಗ್ಗಟ್ಟಿನ ಕರೆ

ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಯಶ್ ಅಭಿಪ್ರಾಯಪಟ್ಟರು. ಉತ್ತಮ ಕಥೆಗಳು ಹಾಗೂ ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸಿ, ಅವುಗಳನ್ನು ಪ್ರೇಕ್ಷಕರು ಬೆಂಬಲಿಸುವ ಮೂಲಕ ಭಾರತದ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಮತ್ತಷ್ಟು ಗೌರವ ತಂದುಕೊಡಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ:

‘ಟಾಕ್ಸಿಕ್’ ಬಗ್ಗೆ ಯಶ್ ಹೇಳಿದ್ದೇನು?

‘ಟಾಕ್ಸಿಕ್’ ಚಿತ್ರದ ಕುರಿತು ಮಾತನಾಡಿದ ಯಶ್, ಇದು ಸಿದ್ಧ ಸೂತ್ರಗಳನ್ನು ಅನುಸರಿಸದ ವಿಭಿನ್ನ ಪ್ರಯತ್ನ ಎಂದು ವಿವರಿಸಿದರು. ಚಿತ್ರದಲ್ಲಿ ಹೊಸ ರೀತಿಯ ನಿರೂಪಣೆ ಹಾಗೂ ದೊಡ್ಡ ಮಟ್ಟದ ಕಲ್ಪನೆಗಳಿದ್ದು, ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ನಿರೀಕ್ಷೆಗೂ ಮೀರಿದ ಅನುಭವ ಸಿಗಲಿದೆ ಎಂದು ಹೇಳಿದರು. ಆಗಸ್ಟ್ 26ರಂದು ಸಿನಿಮಾ ವೀಕ್ಷಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದರು.

ಯುವಕರಿಗೆ ವಿಶೇಷ ಸಂದೇಶ

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರಿದ್ದನ್ನು ಗಮನಿಸಿದ ಯಶ್, ಸಿನಿಮಾ ಸೇರಿದಂತೆ ಜೀವನದಲ್ಲೂ ದೊಡ್ಡ ಕನಸುಗಳನ್ನು ಕಾಣುವಂತೆ ಸಲಹೆ ನೀಡಿದರು. ಯಾವುದೇ ಕ್ಷೇತ್ರದಲ್ಲಿದ್ದರೂ ಗುರಿ ದೊಡ್ಡದಾಗಿರಲಿ, ಅದನ್ನು ಸಾಧಿಸಲು ನಿರಂತರ ಪ್ರಯತ್ನ ಮಾಡಬೇಕು. ಆಗ ಯಶಸ್ಸು ಮತ್ತು ಗೌರವ ಎರಡೂ ದೊರೆಯುತ್ತದೆ ಎಂದು ಯುವಕರಿಗೆ ಪ್ರೇರಣೆ ನೀಡಿದರು.

ಚಿತ್ರದ ಸಹನಟಿಯರಾದ ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ ಹಾಗೂ ತಾರಾ ಸುತಾರಿಯಾ ಸೇರಿದಂತೆ ಇಡೀ ತಂಡವನ್ನು ಯಶ್ ಇದೇ ವೇಳೆ ಪ್ರಶಂಸಿಸಿದರು.

ಹೈದರಾಬಾದ್‌ನಲ್ಲಿ ನಡೆದ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಭಿಮಾನಿಗಳ ಉತ್ಸಾಹದ ನಡುವೆ ಯಶ್ ನೀಡಿದ ಸಂದೇಶ, ಭಾರತೀಯ ಚಿತ್ರರಂಗವನ್ನು ಒಗ್ಗೂಡಿಸುವ ಅವರ ಮಾತು ಹಾಗೂ ಯುವಕರಿಗೆ ನೀಡಿದ ಸ್ಫೂರ್ತಿದಾಯಕ ಸಲಹೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದವು. ಇದೀಗ ಆಗಸ್ಟ್ 26ರಂದು ‘ಟಾಕ್ಸಿಕ್’ ತೆರೆಕಾಣಲಿದ್ದು, ಯಶ್ ಅವರ ವಿಭಿನ್ನ ಪ್ರಯತ್ನವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !