ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಮೀಸಲಾತಿ ವಿಷಯವಾಗಿ ರಾಜಕೀಯ ವಾಗ್ವಾದ ತೀವ್ರವಾಗುತ್ತಿರುವ ನಡುವೆ, ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರುತ್ತಾ, ಮಹಿಳಾ ಮೀಸಲಾತಿ ಕುರಿತು ಮಾಡಲಾಗುತ್ತಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಮಹಿಳಾ ಮೀಸಲಾತಿಗೆ ವಿರೋಧಿಯಲ್ಲ ಎಂದು ಹೇಳಿದರು. “ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಎರಡು ಬೇರೆ ವಿಷಯಗಳು. ಆದರೆ ಅವುಗಳನ್ನು ಉದ್ದೇಶಪೂರ್ವಕವಾಗಿ ಒಂದಾಗಿ ಮಿಶ್ರಣ ಮಾಡಿ ಜನರಿಗೆ ತಪ್ಪು ಸಂದೇಶ ನೀಡಲಾಗುತ್ತಿದೆ” ಎಂದು ಅವರು ಆರೋಪಿಸಿದರು.
ಖರ್ಗೆಯವರ ಪ್ರಕಾರ, ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡುವ ಸಾಧ್ಯತೆ ಇದೆ. ಜೊತೆಗೆ ಇದು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಪ್ರತಿನಿಧಿತ್ವದ ಮೇಲೂ ಪರಿಣಾಮ ಬೀರುವ ಆತಂಕವಿದೆ. ಈ ಕಾರಣಕ್ಕೆ ಹಲವು ವಿರೋಧ ಪಕ್ಷಗಳು ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:
ಇದೇ ವೇಳೆ, ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತಡವಾಗಿರುವುದರ ಬಗ್ಗೆ ಪ್ರಶ್ನೆ ಎತ್ತಿದ ಅವರು, “2023ರಲ್ಲಿ ನಾರಿ ಶಕ್ತಿ ಬಿಲ್ ಮಂಡನೆ ಮಾಡಲಾಗಿದೆ. ಆದರೆ ಇಷ್ಟು ತಿಂಗಳು ಕಳೆದರೂ ಏಕೆ ಜಾರಿಗೆ ತರಲಾಗಿಲ್ಲ?” ಎಂದು ಪ್ರಶ್ನಿಸಿದರು. ಸರ್ಕಾರ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಬಳಸುತ್ತಿದೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಉಲ್ಲೇಖಿಸಿದ ಖರ್ಗೆ, ಮಹಿಳೆಯರಿಗೆ ಸದಾ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳಿದರು. “ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗಿದ್ದವರು, ಸರೋಜಿನಿ ನಾಯ್ಡು ನಮ್ಮ ಪಕ್ಷದ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು. ಸೋನಿಯಾ ಗಾಂಧಿ ಪಕ್ಷವನ್ನು ಮುನ್ನಡೆಸಿದ್ದಾರೆ. ಇದು ನಮ್ಮ ಬದ್ಧತೆಯ ಸಾಕ್ಷಿ” ಎಂದರು.
ಪ್ರಧಾನಿ ಮಾಡುತ್ತಿರುವ ಆರೋಪಗಳು ವಾಸ್ತವಿಕತೆಗೆ ದೂರವಾಗಿದ್ದು, ಮಹಿಳಾ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್‌ನ ನಿಲುವು ಸ್ಪಷ್ಟವಾಗಿದೆ ಎಂದು ಖರ್ಗೆ ಪುನರುಚ್ಚರಿಸಿದರು.



