May 10, 2026
Sunday, May 10, 2026
spot_img

ವರದಕ್ಷಿಣೆ ಕಿರುಕುಳದ ಒತ್ತಡದಿಂದ ಆತ್ಮಹತ್ಯೆಗೆ ಶರಣಾದ ಟೆಕ್ಕಿ, ಮಗು ಅನಾಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗಂಡನ ಮನೆಯವರ ಕಿರುಕುಳದಿಂದಾಗಿ ಮನನೊಂದು ಖಿನ್ನತೆಗೆ ಒಳಗಾಗಿದ್ದ ಟೆಕ್ಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಮಿಳುನಾಡಿನ ತಿರುವಾರೂರ್‌ ಜಿಲ್ಲೆಯ ನೀಡಮಂಗಳಂ ನಿವಾಸಿ ಭುವನೇಶ್ವರಿ ಮೃತರು. ಪತಿ ಹರೀಶ್‌ ಕುಮಾರ್‌ ಹಾಗೂ ಭುವನೇಶ್ವರಿ ಪ್ರೀತಿಸಿ ಮದುವೆಯಾದವರು. ಇವರಿಗೆ ಒಂದೂವರೆ ವರ್ಷದ ಮಗು ಇದೆ.

ಪ್ರೀತಿಸಿ ಮನೆಯವರ ಜೊತೆ ಮಾತನಾಡಿ ಮದುವೆಗೆ ಒಪ್ಪಿಗೆ ಪಡೆದಿದ್ದರು. ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಟ್ಟಿದ್ದ ಭುವನೇಶ್ವರಿ ಕುಟುಂಬದವರು ಬರೋಬ್ಬರಿ 25 ಲಕ್ಷ ರೂ. ಖರ್ಚು ಮಾಡಿದ್ದರು.

ಇಷ್ಟೆಲ್ಲಾ ಮಾಡಿದ್ದರೂ ಪತಿ ಹರೀಶ್‌, ಅತ್ತೆ ಕಾರ್ತಿಗೈವಲ್ಲ ಹಾಗೂ ಮೈದುನ ರಾಕೇಶ್‌ ವರದಕ್ಷಿಣೆ ತರುವಂತೆ ಪೀಡಿಸಿದ್ದಾರೆ. ಅವರ ಕಾಟಕ್ಕೆ ಬೇಸತ್ತು ಭುವನೇಶ್ವರಿ ಡಿಪ್ರೆಶನ್‌ನಲ್ಲಿದ್ದರು. ಜೆಪಿ ನಗರದ ಫ್ಲಾಟ್‌ನಲ್ಲಿದ್ದ ಭುವನೇಶ್ವರಿ ಆತ್ಮಹತ್ಯೆಯ ದಾರಿಯನ್ನು ಆಯ್ಕೆ ಮಾಡಿದ್ದರು.

ನಿತ್ಯವೂ ಭುವನೇಶ್ವರಿಯ ಸ್ನೇಹಿತೆ ಕರೆ ಮಾಡಿ ಮಾತನಾಡುತ್ತಿದ್ದಳು. ಆದರೆ ಎಷ್ಟು ಬಾರಿ ಕರೆ ಮಾಡಿದರೂ ರಿಸೀವ್‌ ಆಗದ ಕಾರಣ ಆಕೆ ಭುವನೇಶ್ವರಿ ತಾಯಿಗೆ ಕರೆ ಮಾಡಿ ಹೇಳಿದ್ದಳು. ಅವರು ಬಂದು ನೆರೆ ಹೊರೆಯವರ ಸಹಾಯದಿಂದ ಮನೆಯ ಬಾಗಿಲನ್ನು ತೆಗೆದಿದ್ದಾರೆ.

ಭುವನೇಶ್ವರಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಡಿಪ್ರೆಶನ್‌ನಲ್ಲಿದ್ದ ಭುವನೇಶ್ವರಿ ಕೌನ್ಸೆಲಿಂಗ್‌ ತೆಗೆದುಕೊಂಡಿದ್ದರು. ಮನೆಯಲ್ಲಿ ಜಗಳಗಳಾಗಿ ಒಮ್ಮೆ ಹರೀಶ್‌ ಆಕೆಯನ್ನು ತವರು ಮನೆಗೂ ಬಿಟ್ಟು ಬಂದಿದ್ದ. ಮಾತನಾಡಿ ಬಗೆಹರಿಸೋಣ ಎಂದರೆ ಅದಕ್ಕೂಒಪ್ಪಿರಲಿಲ್ಲ. ಡಿವೋರ್ಸ್‌ ಕೊಡು ಎಂದು ಹರೀಶ್‌ ಫ್ಯಾಮಿಲಿ ಭುವನೇಶ್ವರಿಯನ್ನು ಪೀಡಿಸಿದ್ದರು. ಆದರೆ ಆಕೆಗೆ ಅದು ಇಷ್ಟವಿರಲಿಲ್ಲ. ಡಿವೋರ್ಸ್‌ ನೀಡದಿದ್ರೆ ಸಾಯಿಸ್ತೀವಿ ಎಂದು ಬೆದರಿಕೆ ಕೂಡ ಹಾಕಿದ್ದರು ಎನ್ನಲಾಗಿದೆ.

ತಿಂಗಳ ಸಂಬಳದಲ್ಲಿ ಮೂವತ್ತು ಸಾವಿರ ರೂಪಾಯಿಯನ್ನು ಮಗಳು ಗಂಡನ ಮನೆಗೆ ನೀಡುತ್ತಿದ್ದಳು. ಆದರೂ ಅವರಿಗೆ ಕನಿಕರ ಇರಲಿಲ್ಲ. ನಮ್ಮ ಮೊಮ್ಮಗುವಿಗೆ ಅನಾರೋಗ್ಯ ಉಂಟಾದಾಗಲೂ ತಂದೆ ಎನಿಸಿಕೊಂಡವನು ಬಂದು ನೋಡಲಿಲ್ಲ ಎಂದು ಭುವನೇಶ್ವರಿ ತಾಯಿ ಕಣ್ಣೀರು ಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !