ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಫ್ರಿಕಾದ ಕಾಂಗೋ ದೇಶದಲ್ಲಿ ಎಬೋಲಾ ಸೋಂಕಿನ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆ ಈಗ 136ಕ್ಕೆ ಏರಿಕೆಯಾಗಿದೆ. ಸೋಂಕಿನ ವೇಗ ಮತ್ತು ವ್ಯಾಪ್ತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಗಂಭೀರ ಹಂತ ತಲುಪಿದೆ ಎಂದು ಎಚ್ಚರಿಸಿದೆ..
WHOನಿಂದ ತುರ್ತು ಎಚ್ಚರಿಕೆ
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿ, ಎಬೋಲಾ ಸೋಂಕನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. ವೈರಸ್ ವೇಗವಾಗಿ ಹರಡುತ್ತಿರುವುದು ಆತಂಕ ಹೆಚ್ಚಿಸಿದ್ದು, ತಡೆ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ನೆರೆಯ ರಾಷ್ಟ್ರಗಳಲ್ಲೂ ಹೈ ಅಲರ್ಟ್
ಇಟುರಿ ಮತ್ತು ಉತ್ತರ ಕಿವು ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗಿ ಕಂಡುಬಂದಿದ್ದು, ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರುವಾಂಡಾ, ಬರುಂಡಿ ಮತ್ತು ಟಾಂಜಾನಿಯಾ ಸೇರಿದಂತೆ ನೆರೆಯ ರಾಷ್ಟ್ರಗಳು ಗಡಿ ತಪಾಸಣೆ ಹಾಗೂ ಆರೋಗ್ಯ ಕಣ್ಗಾವಲು ಕ್ರಮಗಳನ್ನು ಕಠಿಣಗೊಳಿಸಿವೆ.
ಲಸಿಕೆ ಕೊರತೆಯೇ ದೊಡ್ಡ ಸವಾಲು
ಕಾಂಗೋ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ದೇಶಾದ್ಯಂತ 543 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, 32 ಪ್ರಕರಣಗಳು ಪ್ರಯೋಗಾಲಯದಲ್ಲಿ ದೃಢಪಟ್ಟಿವೆ. 69 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯಕ್ಕೆ ಪರಿಣಾಮಕಾರಿ ಲಸಿಕೆ ಲಭ್ಯವಿಲ್ಲದಿರುವುದು ವೈದ್ಯಕೀಯ ವಲಯದ ಆತಂಕಕ್ಕೆ ಕಾರಣವಾಗಿದೆ.



