ಹೊಸದಿಗಂತ ವರದಿ ಹಾಸನ:
ಜಮೀನು ವಿವಾದ ನ್ಯಾಯಾಲಯದಲ್ಲಿ ಇರುವಾಗಲೇ ಭೂಮಾಲೀಕರಿಗೆ ಪಿಎಸ್‌ಐ ಧಮ್ಕಿ ಹಾಕಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಜಾ ಸೇವಾ ಆಂದೋಲನ ಸಭೆಯಲ್ಲೇ ಕೊಣನೂರು ಪಿಎಸ್‌ಐ ಮರಿಯಪ್ಪ ಬಾಳಿ ಅವರನ್ನು ಶಾಸಕ ಎ.ಮಂಜು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಅರಕಲಗೂಡು ತಾಲ್ಲೂಕಿನ ಕೊಣನೂರು ಗ್ರಾಮದಲ್ಲಿ ನಡೆಯುತ್ತಿರುವ ಪ್ರಜಾ ಸೇವಾ ಆಂದೋಲನದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದ ದೂರು ಬಂದಿತ್ತು. ಈ ವೇಳೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಪೊಲೀಸ್ ಅಧಿಕಾರಿಯ ಮಧ್ಯಪ್ರವೇಶದ ಬಗ್ಗೆ ಶಾಸಕ ಎ.ಮಂಜು ಪ್ರಶ್ನೆ ಮಾಡಿದ್ದಾರೆ. ಸಿವಿಲ್ ಸೂಟ್‌ಗೂ ನಿನಗೆ ಸಂಬಂಧವಿಲ್ಲ. ಜಮೀನು ಮಾಲೀಕರು ರಕ್ಷಣೆ ಕೋರಿ ತಹಶೀಲ್ದಾರ್‌ಗೆ ಮನವಿ ಮಾಡಿದರೆ, ತಹಶೀಲ್ದಾರ್ ಸೂಚನೆಯಂತೆ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ನೀನು ಏಕೆ ಅಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:
ಇದೇ ವೇಳೆ ಏನು ದುಡ್ಡಿಗೆ ಅಲ್ಲಿಗೆ ಹೋಗಿದ್ದೀಯಾ ಇದು ಜಾಸ್ತಿ ಆಯ್ತು. ಜನ ಶಾಪ ಹಾಕುತ್ತಾರೆ ಎಂದು ಪಿಎಸ್‌ಐ ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ದುಡ್ಡು, ದುಡ್ಡು ಅಂತ ಹಂಗೆ ಆಡಿಸಿಕೊಳ್ಳುತ್ತಾ ಎಂದು ಪ್ರಶ್ನಿಸಿದ ಶಾಸಕ ಎ.ಮಂಜು, ಹಣದ ವಿಚಾರದಲ್ಲಿ ಪೊಲೀಸರ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ಸಭೆಯಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಡಿಯೋ ಇದೀಗ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.



