ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವಾಲಯದ ಹುಂಡಿಗೆ ಕಾಣಿಕೆ ಹಾಕುವ ಭಕ್ತರು ಸಾಮಾನ್ಯವಾಗಿ ಆರೋಗ್ಯ, ಐಶ್ವರ್ಯ, ಉದ್ಯೋಗ, ಮದುವೆ ಅಥವಾ ಮಕ್ಕಳ ಭವಿಷ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಂಪನೂರು ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಬಾರಿ ಹುಂಡಿ ಎಣಿಕೆ ವೇಳೆ ಸಿಕ್ಕಿರುವ ಒಂದು 20 ರೂಪಾಯಿ ನೋಟು ಎಲ್ಲರನ್ನೂ ಚಕಿತಗೊಳಿಸಿದೆ.
ಹುಂಡಿಯೊಳಗೆ ಸಿಕ್ಕ ಈ ನೋಟಿನ ಮೇಲೆ ಭಕ್ತೆಯೊಬ್ಬರು ತೆಲುಗಿನಲ್ಲಿ ‘ದೇವರೇ… ನನ್ನ ಅತ್ತೆ ಬೇಗ ಸಾಯಬೇಕು’ ಎಂದು ಬರೆದು ಹಾಕಿದ್ದಾರೆ. .
ಹುಂಡಿ ಎಣಿಸುತ್ತಿದ್ದ ಸಿಬ್ಬಂದಿ ಮೊದಲು ನೋಟು ನೋಡಿ ಗಾಬರಿಯಾಗಿದ್ದಾರೆ. ಸಾಮಾನ್ಯವಾಗಿ ಜನರು ತಮ್ಮ ಕಷ್ಟಗಳನ್ನು ಕಾಗದದಲ್ಲಿ ಬರೆದು ದೇವರಿಗೆ ಅರ್ಪಿಸುವುದು ಕಂಡಿದ್ದರೂ, ಈ ರೀತಿ ನೋಟಿನ ಮೇಲೆಯೇ ಅತ್ತೆಯ ವಿರುದ್ಧ ದೂರು ಬರೆದಿರುವುದು ಅವರನ್ನು ಅಚ್ಚರಿಗೆ ತಳ್ಳಿದೆ.
ಇದನ್ನೂ ಓದಿ:
ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆ
ಈ ನೋಟಿನ ಫೋಟೋ ವೈರಲ್ ಆದ ಬಳಿಕ ನೆಟ್ಟಿಗರು ಭರ್ಜರಿ ಕಾಮೆಂಟ್ ಗಳಲ್ಲಿ ತೊಡಗಿದ್ದಾರೆ. 20 ರೂಪಾಯಿ ಸುಪಾರಿ ಕೊಟ್ಟು ದೇವರನ್ನೇ ಕೆಲಸಕ್ಕೆ ಹಾಕಿದ್ದಾಳೆ!, ಪೊಲೀಸ್ ಠಾಣೆ ಬದಲು ನೇರವಾಗಿ ದೇವರ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾಳೆ!, ಅತ್ತೆ-ಸೊಸೆ ಸೀರಿಯಲ್‌ಗಳ ಪರಿಣಾಮ ಈಗ ಹುಂಡಿಗೂ ತಲುಪಿದೆ! ದೇವರೂ ನೋಟು ಓದಿ ಕ್ಷಣಕ್ಕೊಂದು ಬಾರಿ ಯೋಚಿಸಿರಬಹುದು! ಹೀಗೆ ಕಾಮೆಂಟ್ ಮುಂದುವರಿದಿದೆ.
ಆದರೆ ಕೆಲವರು ನೆಟ್ಟಿಗರು ಇಂತಹ ಕೋರಿಕೆಯನ್ನು ಬರೆಯುವಷ್ಟು ಮಾನಸಿಕ ಒತ್ತಡ ಆ ಮಹಿಳೆ ಎದುರಿಸುತ್ತಿರಬಹುದೇ ಎಂಬ ಕಳಕಳಿಯನ್ನೂ ತೋರಿಸಿದ್ದಾರೆ.



