July 4, 2026
Saturday, July 4, 2026
spot_img

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಸದ್ಯಕ್ಕೆ ಟಿಕೆಟ್ ದರ ಏರಿಕೆ ಇಲ್ಲ ಎಂದ BMRCL

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ನಮ್ಮ ಮೆಟ್ರೋ ಟಿಕೆಟ್ ದರವನ್ನು ಮತ್ತೆ ಹೆಚ್ಚಿಸುವ ಸಾಧ್ಯತೆ ಕುರಿತು ಚರ್ಚೆಗಳು ನಡೆದಿದ್ದರೂ, ಸದ್ಯಕ್ಕೆ ದರ ಏರಿಕೆ ಮಾಡಬಾರದು ಎಂದು ಬಿಎಂಆರ್‌ಸಿಎಲ್‌ ಬೋರ್ಡ್ ಮಹತ್ವದ ತೀರ್ಮಾನ ಕೈಗೊಂಡಿದೆ. ಇದರೊಂದಿಗೆ ದರ ಏರಿಕೆಯ ಆತಂಕದಲ್ಲಿದ್ದ ಪ್ರಯಾಣಿಕರಿಗೆ ದೊಡ್ಡ ರಿಲೀಫ್ ದೊರಕಿದೆ.

ಬೋರ್ಡ್ ಸಭೆಯಲ್ಲಿ ಮಹತ್ವದ ನಿರ್ಧಾರ

ಏಪ್ರಿಲ್ 23ರಂದು ನಡೆದ ಬೋರ್ಡ್ ಸಭೆಯಲ್ಲಿ ಮೆಟ್ರೋ ದರ ಪರಿಷ್ಕರಣೆ ಕುರಿತು ಪ್ರಸ್ತಾಪ ಮಂಡನೆಯಾಗಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದ ಸಭೆಯಲ್ಲಿ ಈಗಿನ ಪರಿಸ್ಥಿತಿಯಲ್ಲಿ ದರ ಹೆಚ್ಚಳ ಬೇಡ ಎಂದು ಸೂಚನೆ ನೀಡಲಾಗಿದೆ. ಮುಂದಿನ ಬೋರ್ಡ್ ಸಭೆಯಲ್ಲಿ ಮತ್ತೆ ಈ ವಿಚಾರ ಚರ್ಚೆಗೆ ಬರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ:

ಸಾರ್ವಜನಿಕ ವಿರೋಧದ ಬೆನ್ನಲ್ಲೇ ಹಿಂಜರಿತ

ಈಗಾಗಲೇ ಫೆಬ್ರವರಿ 9ರಿಂದ ಅನ್ವಯವಾಗುವಂತೆ 5 ರೂಪಾಯಿ ದರ ಏರಿಕೆಗೆ ಬಿಎಂಆರ್‌ಸಿಎಲ್ ಮುಂದಾಗಿತ್ತು. ಆದರೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಕಾರಣ ಆ ನಿರ್ಧಾರವನ್ನು ಹಿಂಪಡೆಯಲಾಗಿತ್ತು. ಬಳಿಕ ಸರ್ಕಾರವೂ ಈ ವಿಚಾರವನ್ನು ಬೋರ್ಡ್ ಮಟ್ಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿತ್ತು.

ಪ್ರಯಾಣಿಕರಿಗೆ ಸದ್ಯ ನಿರಾಳ

ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ನಡುವೆಯೇ ಮೆಟ್ರೋ ದರ ಹೆಚ್ಚಳ ಆಗದಿರುವುದು ಪ್ರಯಾಣಿಕರಿಗೆ ಕೊಂಚ ಸಮಾಧಾನ ತಂದಿದೆ. ಮುಂದಿನ ದಿನಗಳಲ್ಲಿ ಬಿಎಂಆರ್‌ಸಿಎಲ್ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !