ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಕಡೆ ಸೋಲಿನ ಸರಣಿಯಿಂದ ಬಳಲುತ್ತಿದ್ದ ಕೆಕೆಆರ್, ಇನ್ನೊಂದು ಕಡೆ ಗೆಲುವಿನ ಲಯ ಹಿಡಿಯಲು ಹೋರಾಟ ನಡೆಸುತ್ತಿದ್ದ ಗುಜರಾತ್ ಟೈಟಾನ್ಸ್ ಈ ರೋಚಕ ಹೋರಾಟದಲ್ಲಿ ಅಂತಿಮವಾಗಿ ಮಿಂಚಿದ್ದು ಗುಜರಾತ್. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿದ ಗುಜರಾತ್, ಲೀಗ್‌ನಲ್ಲಿ ಮೂರನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಮೇಲೇರಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್‌ಗೆ ಆರಂಭದಲ್ಲೇ ಭಾರೀ ಆಘಾತ ಎದುರಾಯಿತು. ತಂಡ ಕೇವಲ 32 ರನ್‌ಗಳಿಗೆ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ರೋವ್‌ಮನ್ ಪೊವೆಲ್ ಮತ್ತು ಕ್ಯಾಮರೂನ್ ಗ್ರೀನ್ ಇನ್ನಿಂಗ್ಸ್‌ಗೆ ಸ್ಥಿರತೆ ತಂದರು. ನಂತರ ಗ್ರೀನ್ ಅದ್ಭುತ ಹೋರಾಟ ನಡೆಸಿ 79 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು.
ಆದರೆ ಕೊನೆಯ ಓವರ್‌ಗಳಲ್ಲಿ ರನ್ ವೇಗ ಕುಂಠಿತಗೊಂಡ ಪರಿಣಾಮ ಕೆಕೆಆರ್ 20 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲೌಟ್ ಆಯಿತು. ಗುಜರಾತ್ ಪರ ರಬಾಡಾ 3 ವಿಕೆಟ್ ಪಡೆದು ಮಿಂಚಿದರೆ, ಸಿರಾಜ್ ಮತ್ತು ಅಶೋಕ್ ಶರ್ಮಾ ತಲಾ 2 ವಿಕೆಟ್ ಕಬಳಿಸಿದರು.
ಇದನ್ನೂ ಓದಿ:
181 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಉತ್ತಮ ಆರಂಭ ಕಂಡಿತು. ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಭದ್ರ ನೆಲೆ ಒದಗಿಸಿದರು. ನಂತರ ಜೋಸ್ ಬಟ್ಲರ್ ಕೂಡ ವೇಗವಾಗಿ 25 ರನ್ ಸೇರಿಸಿ ತಂಡದ ಒತ್ತಡ ಕಡಿಮೆ ಮಾಡಿದರು.
ಈ ಚೇಸ್‌ನ ಹೀರೋ ಆಗಿ ಮಿಂಚಿದ್ದು ನಾಯಕ ಶುಭಮನ್ ಗಿಲ್. ಅವರು 86 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡುತ್ತಾ ಸತತ ಮೂರನೇ ಅರ್ಧಶತಕ ದಾಖಲಿಸಿ ತಂಡವನ್ನು ಗೆಲುವಿನ ದಡದತ್ತ ಕೊಂಡೊಯ್ದರು. ಶತಕದತ್ತ ಸಾಗುತ್ತಿದ್ದ ವೇಳೆ ಔಟಾದರೂ, ಕೊನೆಯ ಕ್ಷಣದಲ್ಲಿ ಗ್ಲೆನ್ ಫಿಲಿಪ್ಸ್ ಮತ್ತು ರಾಹುಲ್ ತೆವಾಟಿಯಾ ಸಮಚಿತ್ತದಿಂದ ಆಟವಾಡಿ ಗುಜರಾತ್‌ಗೆ 19.4 ಓವರ್‌ಗಳಲ್ಲಿ ಗೆಲುವು ತಂದುಕೊಟ್ಟರು.
ಈ ಸೋಲಿನೊಂದಿಗೆ ಕೆಕೆಆರ್ ಆಡಿದ 6 ಪಂದ್ಯಗಳಲ್ಲಿ 5 ಸೋಲು ಹಾಗೂ ಒಂದು ಪಂದ್ಯ ಮಳೆಯಿಂದ ರದ್ದಾದ ದಾಖಲೆ ಹೊಂದಿದೆ. ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ತಂಡಕ್ಕೆ ಅತ್ಯವಶ್ಯಕವಾಗಿದೆ.



