ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಕತಿಹಾರ್‌ನಲ್ಲಿ ಇತ್ತೀಚೆಗೆ ಚಲಿಸುವ ರೈಲಿನಲ್ಲಿ ನಡೆದಿದ್ದ ತಂತ್ರಜ್ಞ ದೇವ್ ಕುಮಾರ್ ಗುಂಜನ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದರೋಡೆಕೋರರ ಕೃತ್ಯವೆಂದು ಭಾವಿಸಲಾಗಿದ್ದ ಈ ಕೊಲೆಯ ಹಿಂದೆ ಸ್ವತಃ ಮೃತನ ಪತ್ನಿ ಸಮಿತಾ ಕುಮಾರಿ ಮಾಸ್ಟರ್ ಮೈಂಡ್ ಆಗಿರುವುದು ಪತ್ತೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತ್ನಿ, ಆಕೆಯ ಪ್ರಿಯಕರ ಹಾಗೂ ಸುಪಾರಿ ಕಿಲ್ಲರ್‌ನನ್ನು ಪೊಲೀಸರು ಬುಧವಾರ ಜೈಲಿಗಟ್ಟಿದ್ದಾರೆ.
ಅಕ್ರಮ ಸಂಬಂಧ ತಂದ ಆಪತ್ತು
ಸರ್ಕಾರಿ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ (MVI) ಆಗಿದ್ದ ಸಮಿತಾಗೆ ಅಜಿತ್ ಕುಮಾರ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು. ಇವರ ಪ್ರೀತಿಯ ದಾರಿಗೆ ಮುಳ್ಳಾಗಿದ್ದ ಪತಿ ಗುಂಜನ್‌ನನ್ನು ಮುಗಿಸಲು ಇಬ್ಬರೂ ಸ್ಕೆಚ್ ಹಾಕಿದ್ದರು. ಇದಕ್ಕಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಶೂಟರ್ ಧೀರಜ್‌ಗೆ ಸುಪಾರಿ ನೀಡಲಾಗಿತ್ತು. ಜೂನ್ 11 ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗುಂಜನ್‌ನನ್ನು ಹಿಂಬಾಲಿಸಿದ ಧೀರಜ್, ತಲೆಗೆ ಗುಂಡಿಕ್ಕಿ ಬರ್ಬರವಾಗಿ ಕೊಂದಿದ್ದ.
ಪೋಲಿಸ್ ತನಿಖೆಯಲ್ಲಿ ಸತ್ಯ ಒಪ್ಪಿಕೊಂಡ ಆರೋಪಿಗಳು
ರೈಲ್ವೆ ಎಸ್‌ಪಿ ಹರಿಶಂಕರ್ ಕುಮಾರ್ ನೇತೃತ್ವದ ತನಿಖಾ ತಂಡ ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ನಡೆಸಿದಾಗ ಪತ್ನಿಯ ಕರಾಳ ಮುಖ ಬಯಲಾಗಿದೆ. ಸದ್ಯ ಕೊಲೆಗೆ ಬಳಸಿದ್ದ ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. 2018 ರಲ್ಲಿ ಮದುವೆಯಾಗಿದ್ದ ಈ ದಂಪತಿಗೆ 5 ವರ್ಷದ ಹೆಣ್ಣು ಮಗಳಿದ್ದಾಳೆ.



