ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟ್ಯಾಂಡ್‌ಅಪ್ ಕಾಮಿಡಿ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬ ಮಾಡಿದ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಅಂತಿಮವಾಗಿ ಆತ ಕೆಲಸವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸಿದ್ದಾನೆ.
ವೈರಲ್ ಆದ ವಿಡಿಯೋ ಬಳಿಕ ನೆಟ್ಟಿಗರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸಂಬಂಧಿತ ಸಂಸ್ಥೆಯು ಆತನ ವಿರುದ್ಧ ಕ್ರಮ ಕೈಗೊಂಡಿದೆ.
ಕಾಮಿಡಿ ವೇದಿಕೆಯಲ್ಲಿ ಹೇಳಿದ ಮಾತು ವಿವಾದಕ್ಕೆ ಕಾರಣ
ಹಿಮಾಂಶು ಜಂಗ್ರಾ ಎಂಬ ಯುವಕ ತನ್ನ ಡೇಟಿಂಗ್ ಅನುಭವವನ್ನು ಹಂಚಿಕೊಳ್ಳುವ ವೇಳೆ ಹೇಳಿದ ಕೆಲವು ಹೇಳಿಕೆಗಳು ಮಹಿಳೆಯರ ಬಗ್ಗೆ ಅವಮಾನಕಾರಿ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂಬ ಆರೋಪ ಕೇಳಿಬಂದಿತು. ಯುವತಿಯನ್ನು ಊಟಕ್ಕೆ ಕರೆದೊಯ್ದಿದ್ದಾಗಿ ಹೇಳಿದ ಆತ, ಆಕೆಗೆ ₹370 ಮೌಲ್ಯದ ಚಿಕನ್ ಬಿರಿಯಾನಿ ಕೊಡಿಸಿದ್ದೆ ಎಂದು ತಿಳಿಸಿದ್ದ. ಬಳಿಕ ಆ ಯುವತಿ ತನ್ನನ್ನು ಮನೆಗೆ ಬಿಟ್ಟುಬರಲು ಕೇಳಿಕೊಂಡಿದ್ದ ವಿಚಾರವನ್ನು ಆತ ಹಾಸ್ಯಮಯವಾಗಿ ವಿವರಿಸಿದ್ದ.
ಆದರೆ, ನಂತರ ಆತ ಮಾಡಿದ ಮತ್ತೊಂದು ಹೇಳಿಕೆ ವಿವಾದಕ್ಕೆ ಕಾರಣವಾಯಿತು. ತಾನು ಖರ್ಚು ಮಾಡಿದ ಹಣಕ್ಕೆ ಪ್ರತಿಯಾಗಿ ದೈಹಿಕ ಸಂಬಂಧ ಹೊಂದುವ ನಿರೀಕ್ಷೆ ಇತ್ತು ಎಂಬ ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾನೆ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಅನೇಕರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಕ್ಷಮೆ ಕೇಳಿದರೂ ನಿಲ್ಲದ ಟೀಕೆ
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯಾದ ಬಳಿಕ ಹಿಮಾಂಶು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಜೊತೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಕೂಡ ಸ್ಥಗಿತಗೊಳಿಸಿದ್ದರು. ಆದರೂ ವಿವಾದ ತಣ್ಣಗಾಗಲಿಲ್ಲ.
ಸಂಸ್ಥೆಯಿಂದ ವಜಾ; ಮಿಶ್ರ ಪ್ರತಿಕ್ರಿಯೆ
ಹಿಮಾಂಶು ಕೆಲಸ ಮಾಡುತ್ತಿದ್ದ ಗುರುಗ್ರಾಮ ಮೂಲದ ಸಂಸ್ಥೆ ಅವರನ್ನು ಕೆಲಸದಿಂದ ತೆಗೆದಿರುವುದಾಗಿ ತಿಳಿದು ಬಂದಿದೆ. ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಕಂಪನಿಯ ಕ್ರಮವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ತಪ್ಪು ಮಾಡಿದವರಿಗೆ ತಿದ್ದುಕೊಳ್ಳುವ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.



