ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಸವಾಲುಗಳ ನಡುವೆಯೂ ಭಾರತದ ರಫ್ತು ವಲಯವು 2025-26ರ ಹಣಕಾಸು ವರ್ಷದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಒಟ್ಟು ರಫ್ತು ಪ್ರಮಾಣವು 860.09 ಬಿಲಿಯನ್ ಡಾಲರ್‌ಗಳಿಗೆ ಏರುವ ಮೂಲಕ ಸ್ವತಂತ್ರ ಭಾರತದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಕಳೆದ 2024-25ರ ಹಣಕಾಸು ವರ್ಷದಲ್ಲಿ ದೇಶವು 825.26 ಬಿಲಿಯನ್ ಡಾಲರ್ ಮೌಲ್ಯದ ರಫ್ತು ನಡೆಸಿತ್ತು. ಈ ಬಾರಿಯ ಸಾಧನೆಯು ಹಿಂದಿನ ವರ್ಷಕ್ಕಿಂತ ಶೇ. 4.22ರಷ್ಟು ಪ್ರಗತಿ ಕಂಡಿದೆ. ಕೇಂದ್ರ ವಾಣಿಜ್ಯ ಸಚಿವಾಲಯದ ಮಾಹಿತಿ ಪ್ರಕಾರ, ಈ ಬೃಹತ್ ಮೊತ್ತದಲ್ಲಿ ಸರಕು ಮತ್ತು ಸೇವೆಗಳೆರಡೂ ಒಳಗೊಂಡಿವೆ.
ಒಟ್ಟು ಸರಕು ರಫ್ತು: 441.78 ಬಿಲಿಯನ್ ಡಾಲರ್ (ಹಿಂದಿನ ವರ್ಷ 437.70 ಬಿಲಿಯನ್ ಡಾಲರ್).
ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್ ಸರಕುಗಳು, ಕಲ್ಲಿದ್ದಲು, ಅದಿರುಗಳು ಮತ್ತು ಕರಕುಶಲ ವಸ್ತುಗಳು ಮುಂಚೂಣಿಯಲ್ಲಿವೆ.
ಮಾರ್ಚ್ ತಿಂಗಳಲ್ಲಿ ಭಾರತದ ಆಮದು ಪ್ರಮಾಣವು 59.9 ಬಿಲಿಯನ್ ಡಾಲರ್‌ಗೆ ತಗ್ಗಿದ್ದು, ರಫ್ತು ಪ್ರಮಾಣ 38.92 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ವ್ಯಾಪಾರ ಕೊರತೆಯು 20.98 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿರುವುದು ದೇಶದ ಆರ್ಥಿಕತೆಗೆ ಸಕಾರಾತ್ಮಕ ಅಂಶವಾಗಿದೆ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಮಾರ್ಚ್ ತಿಂಗಳಲ್ಲಿ ಭಾರತ ಉತ್ತಮ ವಹಿವಾಟು ನಡೆಸಿದೆ. ಆದರೆ, ಜಾಗತಿಕ ಬಿಕ್ಕಟ್ಟುಗಳು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಈ ವೇಗವನ್ನು ಕಾಯ್ದುಕೊಳ್ಳುವುದು ತುಸು ಸವಾಲಿನ ಕೆಲಸವಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.



