ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರಾಚ್ಯದಲ್ಲಿನ ಸಂಘರ್ಷ ಇನ್ನೇನ್ನು ಮುಗಿಯಿತು ಎಂದು ಅಂದುಕೊಂಡ ಕೂಡಲೇ ,ಇರಾನ್ ಹಾರ್ಮುಜ್ ಜಲಸಂಧಿಯ ಮೇಲೆ ಮತ್ತೆ ನಿರ್ಬಂಧ ಹೇರಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ .
ಅಮೆರಿಕ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಈ ಬೆನ್ನಲ್ಲೇ ಇರಾನ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಶುಕ್ರವಾರವಷ್ಟೇ ಲೆಬನಾನ್‌ನಲ್ಲಿ ಕದನ ವಿರಾಮ ಹಿನ್ನೆಲೆಯಲ್ಲಿ ಜಲಸಂಧಿಯನ್ನು ಮುಕ್ತಗೊಳಿಸಿದ್ದ ಇರಾನ್, ಇದೀಗ ಅಮೆರಿಕದ ನೌಕಾಪಡೆಯು ಇನ್ನೂ ದಿಗ್ಬಂಧನ ಮುಂದುವರಿಸುವುದಾಗಿ ಹೇಳಿದ್ದ ಬೆನ್ನಲ್ಲೇ ಇರಾನ್ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ ಎಲ್ಲಿವರೆಗೆ ಇರುತ್ತದೆ ಅಲ್ಲಿವರೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಾಗಾಟವನ್ನು ನಿರ್ಬಂಧಿಸುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಎಚ್ಚರಿಸಿದೆ.
ಲೆಬನಾನ್‌ನಲ್ಲಿ 10 ದಿನಗಳ ಕದನ ವಿರಾಮದ ನಂತರ ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳಿಗೆ ಸಂಪೂರ್ಣವಾಗಿ ತೆರೆಯಲಾಗಿದೆ ಎಂದು ಇರಾನ್ ಘೋಷಿಸಿತ್ತು. ಆದರೆ ಇತ್ತ ಇರಾನ್‌ನ ಹಡಗುಗಳ ಮೇಲಿನ ದಿಗ್ಬಂಧನ ಮುಂದುವರಿಯುತ್ತದೆ ಎಂದು ಟ್ರಂಪ್ ಪುನರುಚ್ಚರಿಸಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಸಂಘರ್ಷದ ಭೀತಿಯನ್ನು ಹುಟ್ಟುಹಾಕಿದೆ.



