September 29, 2026
Tuesday, September 29, 2026
spot_img

ಸಿದ್ದರಾಮಯ್ಯ ಮೂರ್ತಿ ತೆರವು ಖಂಡಿಸಿ ‘ಕಲಬುರಗಿ ಚಲೋ’: ಮರುಸ್ಥಾಪನೆಗೆ ಕುರುಬರ ಸಂಘ ಒತ್ತಾಯ

ಹೊಸದಿಗಂತ ವರದಿ ಕಲಬುರಗಿ:

ನಗರದ ಹೈಕೋರ್ಟ್ ವೃತ್ತದಲ್ಲಿ ಸ್ಥಾಪಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿ ಹಾಗೂ ನಾಮಫಲಕವನ್ನು ತೆರವುಗೊಳಿಸಿರುವ ಕ್ರಮ ಖಂಡಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲಬುರಗಿ ಜಿಲ್ಲಾ ಶಾಖೆ ಮಂಗಳವಾರ ಕಲಬುರಗಿ ಚಲೋ ಪ್ರತಿಭಟನೆ ನಡೆಸಿತು.

ಸಂಘದ ಅಧ್ಯಕ್ಷ ಭಗವಂತರಾಯ ಗೌಡ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿದರು.

ಸೆ.16ರಂದು ಅಫಜಲಪುರ ಮಾರ್ಗದ ಹೈಕೋರ್ಟ್ ವೃತ್ತದಲ್ಲಿ ಸಿದ್ದರಾಮಯ್ಯ ಅವರ 9 ಅಡಿ ಎತ್ತರದ ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಇದೇ ಸ್ಥಳದಲ್ಲಿ 2023ರಲ್ಲಿ ಸಿದ್ದರಾಮಯ್ಯ ವೃತ್ತ ಎಂಬ ನಾಮಫಲಕ ಅಳವಡಿಸಲಾಗಿತ್ತು ಎಂದು ಸಂಘ ತಿಳಿಸಿದೆ. ಆದರೆ ಸೆ.17ರಂದು ಮಹಾನಗರ ಪಾಲಿಕೆ ಅಧಿಕಾರಿಗಳು ಸಮಾಜದ ಮುಖಂಡರಿಗೆ ಯಾವುದೇ ಮಾಹಿತಿ ನೀಡದೆ ಮೂರ್ತಿ ಹಾಗೂ ನಾಮಫಲಕ ತೆರವುಗೊಳಿಸಿದ್ದಾರೆ ಎಂದು ಆರೋಪಿಸಲಾಯಿತು.

ಇದನ್ನೂ ಓದಿ:

ಮೂರ್ತಿಯನ್ನು ಪೌರಕಾರ್ಮಿಕರ ಮೂಲಕ ಪಾಲಿಕೆಯ ಕಸದ ವಾಹನದಲ್ಲಿ ಸಾಗಿಸಿರುವುದು ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಸಂಘದ ಮುಖಂಡರು ಆಕ್ಷೇಪಿಸಿದರು. ಮೂರ್ತಿ ಸ್ಥಾಪನೆಗೆ ಸಂಬಂಧಿಸಿದಂತೆ ಕಾನೂನು ಅಥವಾ ಆಡಳಿತಾತ್ಮಕ ಸಮಸ್ಯೆಗಳಿದ್ದರೆ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಗೌರವಯುತವಾಗಿ ತೆರವುಗೊಳಿಸಬಹುದಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೈಕೋರ್ಟ್ ವೃತ್ತದಲ್ಲಿಯೇ ಜಿಲ್ಲಾಡಳಿತದ ವತಿಯಿಂದ ಸಿದ್ದರಾಮಯ್ಯ ಅವರ ಮೂರ್ತಿಯನ್ನು ಗೌರವಯುತವಾಗಿ ಮರುಸ್ಥಾಪಿಸಬೇಕು ಎಂದು ಸಂಘ ಆಗ್ರಹಿಸಿದೆ. ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು.

Must Read