ಹೊಸದಿಗಂತ ವರದಿ ಬೆಳಗಾವಿ:
ರಾಜ್ಯ ಸರ್ಕಾರದ ವಿರುದ್ಧ ವಿವಿಧ ಆರೋಪಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಚನ್ನಮ್ಮ ವೃತ್ತದಲ್ಲಿ ಮುಖ್ಯಮಂತ್ರಿ ಅವರ ಅಣಕು ಶವಯಾತ್ರೆ ನಡೆಸಲು ಕಾರ್ಯಕರ್ತರು ಮುಂದಾದಾಗ ಪೊಲೀಸರು ಮಧ್ಯಪ್ರವೇಶಿಸಿ ತಡೆದರು.
ಬುಧವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಖಾಲಿ ಚಂಬುಗಳು ಹಾಗೂ ವಿವಿಧ ಬಿತ್ತಿಪತ್ರಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರ್ಕಾರದ ಆರ್ಥಿಕ ನೀತಿಗಳು ಹಾಗೂ ಅನುದಾನ ಘೋಷಣೆಗಳನ್ನು ಖಂಡಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಭಾಗವಾಗಿ ಮುಖ್ಯಮಂತ್ರಿ ಅವರ ಅಣಕು ಶವಯಾತ್ರೆ ನಡೆಸಲು ಕಾರ್ಯಕರ್ತರು ಮುಂದಾದರು. ಈ ವೇಳೆ ಪೊಲೀಸರು ತಡೆದು ಅಣಕು ಶವವನ್ನು ವಶಕ್ಕೆ ಪಡೆಯಲು ಮುಂದಾದರು. ಇದರಿಂದ ಬಿಜೆಪಿ ಮುಖಂಡರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.
ಬಳಿಕ ಚನ್ನಮ್ಮ ವೃತ್ತದಲ್ಲೇ ಅಣಕು ಶವ ದಹನ ನಡೆಸಲು ಪ್ರತಿಭಟನಾಕಾರರು ಪ್ರಯತ್ನಿಸಿದರು. ಆದರೆ ಪೊಲೀಸರು ಅದಕ್ಕೂ ಅವಕಾಶ ನೀಡಲಿಲ್ಲ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ಹಣಕಾಸಿನ ಲಭ್ಯತೆ ಇಲ್ಲದಿದ್ದರೂ ವಿವಿಧೆಡೆ ಕೋಟ್ಯಂತರ ರೂಪಾಯಿ ಅನುದಾನ ಘೋಷಿಸಲಾಗುತ್ತಿದೆ ಎಂದು ಅವರು ಟೀಕಿಸಿದರು. ಮುಖ್ಯಮಂತ್ರಿ ಅವರು ಭೇಟಿ ನೀಡಿದ ಪ್ರದೇಶಗಳಲ್ಲಿ ಹಲವು ಭರವಸೆಗಳನ್ನು ನೀಡುತ್ತಿದ್ದರೂ, ಅವುಗಳನ್ನು ಈಡೇರಿಸಲು ಸರ್ಕಾರದ ಬಳಿ ಅಗತ್ಯ ಹಣಕಾಸು ಇಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದನ್ನೂ ಓದಿ:
ಅಲ್ಲದೆ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು, ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಈ ವೇಳೆ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ, ಗೀತಾ ಸುತಾರ್, ಮಾಜಿ ಶಾಸಕ ಸಂಜಯ್ ಪಾಟೀಲ, ಮಹಾಂತೇಶ ಕವಟಗಿಮಠ, ಧನಜಯ್ ಜಾದವ್, ಯಲ್ಲೇಶ್ ಕೊಲಕಾರ. ಸೋಲಾಲಿ ನರ್ಬೋಥ್, ಉಜ್ವಲಾ ಬಡವಾನಾಚ್ಚೆ, ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.



