October 10, 2026
Saturday, October 10, 2026
spot_img

ನಡೆದಾಡುವ ಕಲಾಕೃತಿಯಂತೆ ಕಂಡ ಕರಣ್‌ ಜೋಹರ್‌, ಇದು ರವಿವರ್ಮ- ಮನೀಶ್‌ ಮಲ್ಹೋತ್ರಾ ಮ್ಯಾಜಿಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಈ ಬಾರಿಯ ಮೆಟ್ ಗಾಲಾ ವೇದಿಕೆಯಲ್ಲಿ ಅದ್ಧೂರಿಯಾಗಿ ಪದಾರ್ಪಣೆ ಮಾಡಿದ್ದಾರೆ. ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ವಿಶೇಷ ಕಲಾಕೃತಿಯ ಉಡುಪಿನಲ್ಲಿ ಮಿಂಚಿದ್ದಾರೆ.

ಈ ವರ್ಷದ ಮೆಟ್ ಗಾಲಾ ಥೀಮ್ “ಕಾಸ್ಟ್ಯೂಮ್ ಆರ್ಟ್” ಆಗಿದ್ದು, ಕರಣ್ ಜೋಹರ್ ಉಡುಪಿಗೆ “ಫ್ರೇಮ್ಡ್ ಇನ್ ಎಟರ್ನಿಟಿ” ಎಂದು ಹೆಸರಿಸಲಾಗಿತ್ತು. ಈ ಉಡುಪು ಭಾರತದ ಪ್ರಸಿದ್ಧ ವರ್ಣಚಿತ್ರಕಾರ ರಾಜಾ ರವಿವರ್ಮ ಕಲಾಕೃತಿಗಳಿಂದ ಪ್ರೇರಿತವಾಗಿದ್ದು, ಅವರ ಪ್ರಸಿದ್ಧ ಚಿತ್ರಗಳಾದ ‘ಹಂಸ ದಮಯಂತಿ’ ಮತ್ತು ‘ಕಾದಂಬರಿ’ ಕಲಾಕೃತಿಗಳನ್ನು ಹಸ್ತಚಿತ್ರಿತ ಕಲಾಕೃತಿಯಾಗಿ ಅಳವಡಿಸಲಾಗಿತ್ತು. ಈ ಬಗ್ಗೆ ನಿರ್ದೇಶಕ ಕರಣ್ ಹೇಳುವಂತೆ, “ರವಿವರ್ಮ ಭಾವನೆಗಳನ್ನು ಚಿತ್ರಿಸುತ್ತಿದ್ದರು, ನಾನು ನನ್ನ ಸಿನಿಮಾಗಳ ಮೂಲಕ ಅದನ್ನೇ ಮಾಡಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಕರಣ್ ಪುರಾತನ ಶೈಲಿಯ ಸ್ಟ್ರಕ್ಚರ್ಡ್ ಜಾಕೆಟ್ ಮತ್ತು ಸುಮಾರು 6 ಅಡಿ ಉದ್ದದ ಕೈಯಿಂದ ಚಿತ್ರಿಸಿದ ‘ಕೇಪ್’ ಧರಿಸಿದ್ದರು. ಇದರಲ್ಲಿ ಕಮಲದ ಹೂವುಗಳು, ಹಂಸಗಳು ಮತ್ತು ಕಂಬಗಳ ಚಿತ್ರಣವಿತ್ತು. ಈ ಅದ್ಭುತ ಉಡುಪನ್ನು ಸಿದ್ಧಪಡಿಸಲು 80 ಕ್ಕೂ ಹೆಚ್ಚು ಕಲಾವಿದರು ಸತತ 85 ದಿನಗಳ ಕಾಲ ಶ್ರಮಿಸಿದ್ದಾರೆ. ತೈಲ ವರ್ಣಚಿತ್ರದ ಪರಿಣಾಮ ನೀಡಲು ಉಡುಪಿನ ಮೇಲೆ ವಿಶೇಷ ಫಿನಿಶಿಂಗ್ ಮಾಡಲಾಗಿತ್ತು.

ತಮ್ಮ ಲುಕ್ ಪೂರ್ಣಗೊಳಿಸಲು ಕರಣ್ ತಮ್ಮದೇ ಬ್ರಾಂಡ್ ಆದ ‘ತ್ಯಾನಿ’ ಲೇಬಲ್‌ನ ನೆಕ್ಲೇಸ್ ಮತ್ತು ಉಂಗುರಗಳನ್ನು ಧರಿಸಿದ್ದರು. ಭಾರತೀಯ ಕಲೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸುವ ಮೂಲಕ ಕರಣ್ ಜೋಹರ್ ಎಲ್ಲರ ಗಮನ ಸೆಳೆದಿದ್ದಾರೆ.

Must Read