May 21, 2026
Thursday, May 21, 2026
spot_img

ಐಪಿಎಲ್ 2026: ಮುಂಬೈ ಕಟ್ಟಿಹಾಕಿ ಪ್ಲೇಆಫ್ ರೇಸ್‌ನಲ್ಲಿ ಜೀವಂತ ಉಳಿದ ಕೋಲ್ಕತ್ತಾ ನೈಟ್ ರೈಡರ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತವರು ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅದ್ಭುತ ಪುನರಾಗಮನ ಮಾಡಿದೆ. ಶಿಸ್ತುಬದ್ಧ ಬೌಲಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಕೆಕೆಆರ್, ಮನೀಶ್ ಪಾಂಡೆಯ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 148 ರನ್‌ಗಳ ಗುರಿಯನ್ನು ತಲುಪಿ 2 ಪ್ರಮುಖ ಅಂಕಗಳನ್ನು ತನ್ನದಾಗಿಸಿಕೊಂಡಿತು.

ಕೆಕೆಆರ್ ಬೌಲರ್‌ಗಳ ಜಾಣ್ಮೆಯ ದಾಳಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೆಕೆಆರ್ ಬೌಲರ್‌ಗಳು ಆರಂಭಿಕ ಆಘಾತ ನೀಡಿದರು. ಸೌರಭ್ ದುಬೆ ಮತ್ತು ಕ್ಯಾಮರೂನ್ ಗ್ರೀನ್ ಬೌಲಿಂಗ್‌ಗೆ ತತ್ತರಿಸಿದ ಮುಂಬೈ, ಪವರ್‌ಪ್ಲೇ ಮುಕ್ತಾಯದ ವೇಳೆಗೆ ಕೇವಲ 41 ರನ್‌ಗಳಿಗೆ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆಕೆಆರ್ ಬೌಲರ್‌ಗಳ ಬಿಗಿ ಹಿಡಿತದಿಂದಾಗಿ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 147 ರನ್‌ ಕಲೆಹಾಕಲು ಶಕ್ತವಾಯಿತು.

ರನ್ ಬೆನ್ನಟ್ಟಿದ ಕೆಕೆಆರ್
ನಂತರ ರನ್ ಬೆನ್ನಟ್ಟಿದ ಕೋಲ್ಕತ್ತಾ ತಂಡ ಕೂಡ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಒಳಗಾಗಿತ್ತು. ಆದರೆ, ಈ ಸೀಸನ್‌ನ ಮೊದಲ ಪಂದ್ಯ ಆಡಿದ ಕನ್ನಡಿಗ ಮನೀಶ್ ಪಾಂಡೆ ತಂಡದ ರಕ್ಷಣೆಗೆ ನಿಂತರು. ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಪಾಂಡೆ 33 ಎಸೆತಗಳಲ್ಲಿ 45 ರನ್ ಬಾರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ರೋವ್‌ಮನ್ ಪೋವೆಲ್ (30 ಎಸೆತಗಳಲ್ಲಿ 40 ರನ್) ನಾಲ್ಕನೇ ವಿಕೆಟ್‌ಗೆ 64 ರನ್‌ಗಳ ಅಮೂಲ್ಯ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹತ್ತಿರ ತಂದರು.

ರೋಚಕ ಅಂತ್ಯ
ಕೊನೆಯ ಓವರ್‌ಗಳಲ್ಲಿ ಮುಂಬೈ ಪರ ಕಾರ್ಬಿನ್ ಬಾಷ್ 3 ವಿಕೆಟ್ ಪಡೆದು ಪೈಪೋಟಿ ನೀಡಿದರೂ, ಕೆಕೆಆರ್ ತಂಡ 18.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ಜಯಭೇರಿ ಬಾರಿಸಿತು. ಒತ್ತಡದ ಸಮಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ ಮನೀಶ್ ಪಾಂಡೆ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !