ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಬಿಕ್ಕಟ್ಟುಗಳು ಮತ್ತು ಆರ್ಥಿಕ ಏರುಪೇರುಗಳ ನಡುವೆ, ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ತಮ್ಮ ನಡುವಿನ ವ್ಯಾಪಾರ ಮತ್ತು ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳುವುದು ಇಂದು ಅಗತ್ಯವಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕರೆ ನೀಡಿದ್ದಾರೆ.
ನಾಳೆದಿಂದ (ಶನಿವಾರ) ಆರಂಭವಾಗಲಿರುವ ಮುಖ್ಯ ಶೃಂಗಸಭೆಗೂ ಮುನ್ನ, ನವದೆಹಲಿಯಲ್ಲಿ ಇಂದು ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂ ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದ ಯುದ್ಧಗಳು, ಸಾಂಕ್ರಾಮಿಕ ರೋಗಗಳು ಮತ್ತು ಹವಾಮಾನ ವೈಪರೀತ್ಯಗಳು ವಿಶ್ವದ ಆರ್ಥಿಕತೆಯನ್ನೇ ತಲ್ಲಣಗೊಳಿಸುತ್ತಿರುವ ಇಂದಿನ ಕಠಿಣ ಸಮಯದಲ್ಲಿ ನಾವೆಲ್ಲರೂ ಭೇಟಿಯಾಗುತ್ತಿದ್ದೇವೆ ಎಂದು ಅವರು ಹೇಳಿದರು.
ಕೇವಲ ವ್ಯಾಪಾರ ಅಷ್ಟೇ ಅಲ್ಲ, ಪರಸ್ಪರ ನಂಬಿಕೆ ಮುಖ್ಯ
ಬ್ರಿಕ್ಸ್ ವ್ಯಾಪಾರ ಒಕ್ಕೂಟವು ಕೇವಲ ವಾಣಿಜ್ಯ ಲಾಭಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಕರೆ ನೀಡಿದ ಜೈಶಂಕರ್, ಗಡಿಗಳನ್ನು ದಾಟಿ ವ್ಯಾಪಾರ ಮಾಡುವುದನ್ನು ಮತ್ತಷ್ಟು ಸುಲಭ ಹಾಗೂ ಸುರಕ್ಷಿತಗೊಳಿಸುವತ್ತ ಗಮನ ಹರಿಸಬೇಕು ಎಂದರು.
ಡಿಜಿಟಲ್ ಕ್ರಾಂತಿ ಮತ್ತು ಭಾರತದ ಕೊಡುಗೆ
ತಂತ್ರಜ್ಞಾನ ಮತ್ತು ರಾಜಕಾರಣ ಎರಡೂ ಮುಖಾಮುಖಿಯಾಗುತ್ತಿರುವ ಇಂದಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಫಿನ್‌ಟೆಕ್ ಕ್ಷೇತ್ರಗಳು ನಮಗೆ ದೊಡ್ಡ ಅವಕಾಶಗಳನ್ನು ತಂದುಕೊಟ್ಟಿವೆ. ಭಾರತವು ಬ್ರಿಕ್ಸ್‌ನ ಈ ಹೊಸ ಆರ್ಥಿಕ ಸಹಕಾರಕ್ಕೆ ತನ್ನದೇ ಆದ ದೊಡ್ಡ ಕೊಡುಗೆ ನೀಡಬಲ್ಲದು ಎಂದು ಜೈಶಂಕರ್ ಭರವಸೆ ನೀಡಿದರು.
ಇದನ್ನೂ ಓದಿ:
ಭಾರತದ ಬೃಹತ್ ಮಾರುಕಟ್ಟೆ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಉತ್ಪಾದನಾ ಸಾಮರ್ಥ್ಯ, ಅತ್ಯುತ್ತಮ ತಾಂತ್ರಿಕ ಪ್ರತಿಭೆಗಳು ಮತ್ತು ಡಿಜಿಟಲ್ ಅನುಭವವು ಬ್ರಿಕ್ಸ್ ದೇಶಗಳ ಮುಂದಿನ ಹಂತದ ಬೆಳವಣಿಗೆಗೆ ದೊಡ್ಡ ಇಂಧನವಾಗಬಲ್ಲದು ಎಂದು ಹೆಮ್ಮೆಯಿಂದ ಹೇಳಿದರು. ಭಾರತದ ಬ್ರಿಕ್ಸ್ ಅಧ್ಯಕ್ಷತೆಯಡಿಯಲ್ಲಿ ಉದ್ಯಮಗಳನ್ನು ಪ್ರೋತ್ಸಾಹಿಸಲು ‘ಬ್ರಿಕ್ಸ್ ಸ್ಟಾರ್ಟ್ಅಪ್ ಇನ್ನೋವೇಶನ್ ಫಂಡ್’ ನಂತಹ ಪ್ರಮುಖ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.



