August 12, 2026
Wednesday, August 12, 2026
spot_img

77ರ ವಯಸ್ಸಿನಲ್ಲಿ ಮ್ಯಾರಥಾನ್, ಸ್ಕೈಡೈವ್: ಸೈಬೀರಿಯಾದಲ್ಲಿ ಭಾರತೀಯ ಸೇನಾ ಯೋಧನ ಸಾಹಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಯಸ್ಸು 77… ಆದರೆ ಸಾಹಸದ ಉತ್ಸಾಹ ಮಾತ್ರ ಯುವಕರನ್ನೂ ನಾಚಿಸುವಂತಿದೆ! ಬೆಂಗಳೂರಿನ ನಿವೃತ್ತ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಒಪಿಎನ್ ಕಲ್ಯಾಣ್ ಸೈಬೀರಿಯಾದಲ್ಲಿ ತಮ್ಮ ಸಾಹಸಮಯ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ.

ಸೈಬೀರಿಯನ್ ಅಂತಾರಾಷ್ಟ್ರೀಯ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಅವರು, ಮರುದಿನವೇ 3,000 ಮೀಟರ್ ಎತ್ತರದಿಂದ ಟ್ಯಾಂಡಂ ಸ್ಕೈಡೈವ್ ಮಾಡುವ ಮೂಲಕ ಮತ್ತೊಂದು ರೋಚಕ ಅನುಭವ ತಮ್ಮದಾಗಿಸಿಕೊಂಡಿದ್ದಾರೆ.

ಸೈಬೀರಿಯಾದಲ್ಲಿ ಬಹುಕಾಲದ ಕನಸು ನನಸು

ಆಗಸ್ಟ್ 1ರಂದು ರಷ್ಯಾದ ಓಮ್ಸ್ಕ್‌ನಲ್ಲಿ ನಡೆದ 36ನೇ ಸೈಬೀರಿಯನ್ ಅಂತಾರಾಷ್ಟ್ರೀಯ ಮ್ಯಾರಥಾನ್‌ನಲ್ಲಿ ಕಲ್ಯಾಣ್ ಭಾಗವಹಿಸಿದ್ದರು. ಸುಮಾರು 6,190 ಮಂದಿ ಸ್ಪರ್ಧಿಸಿದ್ದ ಈ ಓಟದಲ್ಲಿ ಅವರು 10 ಕಿ.ಮೀ ವಿಭಾಗದಲ್ಲಿ ಪಾಲ್ಗೊಂಡರು. ವಿಶೇಷವೆಂದರೆ, ಈ ವಿಭಾಗದಲ್ಲಿ ಭಾಗವಹಿಸಿದ್ದ ಕೇವಲ ನಾಲ್ವರು ಅಂತಾರಾಷ್ಟ್ರೀಯ ಸ್ಪರ್ಧಿಗಳ ಪೈಕಿ ಕಲ್ಯಾಣ್ ಕೂಡ ಒಬ್ಬರಾಗಿದ್ದರು. ಇನ್ನುಳಿದವರು ಕೀನ್ಯಾದ ಇಬ್ಬರು ಹಾಗೂ ಇಥಿಯೋಪಿಯಾದ ಒಬ್ಬ ಸ್ಪರ್ಧಿಯಾಗಿದ್ದರು.

ಸೈಬೀರಿಯಾದಲ್ಲಿ ಓಡುವುದು ತಮ್ಮ ಬಹುಕಾಲದ ಕನಸಾಗಿತ್ತು ಎಂದು ಹೇಳಿರುವ ಕಲ್ಯಾಣ್, 77ನೇ ವಯಸ್ಸಿನಲ್ಲಿ ಆ ಕನಸು ನನಸಾಗಿರುವುದು ಹೆಮ್ಮೆಯ ಹಾಗೂ ಭಾವನಾತ್ಮಕ ಕ್ಷಣ ಎಂದು ತಿಳಿಸಿದ್ದಾರೆ.

3,000 ಮೀಟರ್ ಎತ್ತರದಿಂದ ರೋಚಕ ಜಿಗಿತ

ಮ್ಯಾರಥಾನ್ ಮುಗಿಸಿದ ಕೆಲವೇ ಗಂಟೆಗಳಲ್ಲಿ ವಿಶ್ರಾಂತಿ ಪಡೆಯುವ ಬದಲು ಕಲ್ಯಾಣ್ ಮತ್ತೊಂದು ಸಾಹಸಕ್ಕೆ ಸಿದ್ಧರಾಗಿದ್ದರು. ಆಗಸ್ಟ್ 2ರಂದು ಓಮ್ಸ್ಕ್‌ನ ಆಕಾಶದಲ್ಲಿ ಸುಮಾರು 3,000 ಮೀಟರ್ ಎತ್ತರದಿಂದ ಟ್ಯಾಂಡಂ ಸ್ಕೈಡೈವ್ ಮಾಡಿದರು.

ಇದನ್ನೂ ಓದಿ:

ವಿಮಾನದಿಂದ ಜಿಗಿದ ಬಳಿಕ ಸುಮಾರು 40 ಸೆಕೆಂಡ್‌ಗಳ ಕಾಲ ಗಂಟೆಗೆ 200 ಕಿ.ಮೀ ವೇಗದ ಸಮೀಪದಲ್ಲಿ ಫ್ರೀಫಾಲ್ ಅನುಭವಿಸಿದ ಅವರು, ಸುಮಾರು 1,700 ಮೀಟರ್ ಎತ್ತರದಲ್ಲಿ ಪ್ಯಾರಾಚೂಟ್ ತೆರೆಯುವ ಮೂಲಕ ಸುರಕ್ಷಿತವಾಗಿ ಕೆಳಗಿಳಿದರು.

‘ಅದ್ಭುತ ಮತ್ತು ಮರೆಯಲಾಗದ ಅನುಭವ’

ಸೈಬೀರಿಯಾದ ಆಕಾಶದಲ್ಲಿ ನಡೆದ ಸ್ಕೈಡೈವ್ ಅನುಭವವನ್ನು ಅತ್ಯಂತ ರೋಚಕ ಮತ್ತು ಅದ್ಭುತ ಎಂದು ಕಲ್ಯಾಣ್ ಬಣ್ಣಿಸಿದ್ದಾರೆ. ಫ್ರೀಫಾಲ್‌ನ ಆ ಕ್ಷಣಗಳು ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವ ಎಂದು ಅವರು ಹೇಳಿದ್ದಾರೆ.

77ರ ವಯಸ್ಸಿನಲ್ಲೂ ಓಟ ಮತ್ತು ಸ್ಕೈಡೈವ್ ಮೂಲಕ ಸಾಹಸದ ಹೊಸ ಅಧ್ಯಾಯ ಬರೆದಿರುವ ಕಲ್ಯಾಣ್, ‘ವಯಸ್ಸು ಕೇವಲ ಸಂಖ್ಯೆ’ ಎಂಬ ಮಾತಿಗೆ ಜೀವಂತ ಉದಾಹರಣೆಯಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !