ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ವನ್ಯಜೀವಿ ಪ್ರಿಯರಿಗೆ ಸಂತಸದ ಸುದ್ದಿ ಸಿಕ್ಕಿದೆ. ನಾಲ್ಕು ಚೀತಾಗಳನ್ನು ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ತರಲಾಗಿದೆ.
ದಕ್ಷಿಣ ಆಫ್ರಿಕಾದಿಂದ ತರಿಸಲಾದ ಈ ಎರಡು ಗಂಡು ಮತ್ತು ಎರಡು ಹೆಣ್ಣು ಚೀತಾಗಳನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ವಾಗತಿಸಿದರು. ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ಅವಧಿಯಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾಗದಂತೆ ವಿಶೇಷ ಕಾಳಜಿ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ವಿದೇಶಿ ವನ್ಯಜೀವಿಗಳಾಗಿರುವುದರಿಂದ ಈ ಚೀತಾಗಳನ್ನು ಮೊದಲು ಕ್ವಾರಂಟೈನ್‌ನಲ್ಲಿ ಇರಿಸಿ ಆರೋಗ್ಯ ಪರೀಕ್ಷೆ ನಡೆಸಲಾಗುತ್ತದೆ. ಸುಮಾರು 30 ದಿನಗಳ ಕಾಲ ನಿಯಂತ್ರಿತ ಆಹಾರ ನೀಡಲಾಗಿದ್ದು, ಯಾವುದೇ ಸೋಂಕು ಅಥವಾ ತೊಂದರೆಗಳಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ನಂತರ ಅವುಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಗೆ ಸ್ಥಳಾಂತರಿಸಲಾಗುತ್ತದೆ.
ಇದನ್ನೂ ಓದಿ:
ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿ ಸಹ ಚೀತಾಗಳು ಕಂಡುಬರುತ್ತಿದ್ದವು. ಆದರೆ ಈಗ ಅವುಗಳು ನಾಶವಾಗಿರುವ ಹಿನ್ನೆಲೆ, ಮೃಗಾಲಯಗಳ ಮೂಲಕ ಸಾರ್ವಜನಿಕರಿಗೆ ಅವುಗಳನ್ನು ನೋಡುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಚೀತಾಗಳ ಸುರಕ್ಷತೆ ಮತ್ತು ಆರೈಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಹೊಸ ಸೇರ್ಪಡೆಯಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆಯಿದೆ.



