ನಿನ್ನೆಯಷ್ಟೇ ದೆಹಲಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಒಂದೇ ಒಂದು ಎಸಿ ಬ್ಲಾಸ್ಟ್ ಆಗಿ ಒಂಬತ್ತು ಅಮೂಲ್ಯ ಜೀವಗಳನ್ನು ಸುಟ್ಟು ಕರಕಲಾಗಿಸಿದೆ. ನಿಮ್ಮ ಮನೆಯಲ್ಲಿಯೂ ಎಸಿ, ಫ್ರಿಡ್ಜ್, ಟಿವಿ, ವಾಶಿಂಗ್ ಮಶೀನ್ ಹಾಗೇ ಇನ್ನಿತರ ಎಲೆಕ್ಟ್ರಿಕ್ ವಸ್ತುಗಳು ಇದ್ದೇ ಇರುತ್ತವೆ. ಇವುಗಳ ನಿಮ್ಮ ಜೀವನವನ್ನು ಸುಲಭ ಮಾಡಬೇಕೆ ಹೊರತು ನಿಮ್ಮ ಜೀವವನ್ನು ತೆಗೆಯಬಾರದು. ಈ ಎಲೆಕ್ಟ್ರಿಕ್ ವಸ್ತುಗಳನ್ನು ಹೀಗೆ ನೋಡ್ಕೊಂಡ್ರೆ ಸೇಫ್..
ಈ ರೀತಿ ಕ್ಷಣಾರ್ಧದಲ್ಲಿ ಎಲೆಕ್ಟ್ರಿಕ್ ವಸ್ತುಗಳು ಸುಡಲು ಕಾರಣವೆಂದರೆ, ಬೇಸಿಗೆಯಲ್ಲಿ ವಾತಾವರಣದ ಉಷ್ಣತೆಯೂ ಕೂಡ ಹೆಚ್ಚಾಗಿರುತ್ತದೆ. ಇದರ ಜೊತೆಗೆ, ಎಲೆಕ್ಟ್ರಿಕ್ ವಸ್ತುಗಳು ಚಾಲನೆಯಲ್ಲಿರುವಾಗ ತಮ್ಮಷ್ಟಕ್ಕೆ ತಾವೇ ಶಾಖವನ್ನು ಉತ್ಪಾದಿಸುತ್ತವೆ. ಹಾಗಾಗಿ ಹೊರಗಿನ ಶಾಖ ಮತ್ತು ಒಳಗಿನ ಶಾಖ ಎರಡೂ ಸೇರಿ ಉಪಕರಣದ ತಾಪಮಾನ ಹೆಚ್ಚಾಗಿ, ಅದರೊಳಗಿನ ಭಾಗಗಳು ಸುಟ್ಟುಹೋಗುತ್ತದೆ.
ಇದಕ್ಕೆ ಸೂಕ್ತ ಪರಿಹಾರಗಳು ಇಲ್ಲಿವೆ..
ಎಸಿ, ಫ್ರಿಡ್ಜ್ ಮತ್ತು ಟಿವಿಗಳಂತಹ ಬೆಲೆಬಾಳುವ ವಸ್ತುಗಳಿಗೆ ವೋಲ್ಟೇಜ್ ಸ್ಟೆಬಿಲೈಸರ್ ಅಳವಡಿಸಬೇಕು. ಇದು ವೋಲ್ಟೇಜ್ ಏರಿಳಿತಗಳಿಂದ ಆಗುವ ಹಾನಿಯನ್ನು ತಪ್ಪಿಸುತ್ತದೆ.
ಯಾವುದೇ ಎಲೆಕ್ಟ್ರಿಕ್ ವಸ್ತುಗಳನ್ನು ಬಳಸಿ ನಂತರ ಅದನ್ನು ಬರಿ ರಿಮೋಟ್‌ನಿಂದ ಆಫ್ ಮಾಡದೆ, ಸ್ವಿಚ್ ಆಫ್ ಮಾಡಬೇಕು. ಇದು ಅನಗತ್ಯವಾಗಿ ವಸ್ತುಗಳು ಬಿಸಿಯಾಗುವುದನ್ನು ತಡೆಯುತ್ತದೆ.
ಫ್ರಿಡ್ಜ್ ಅಥವಾ ಎಸಿಗಳ ಹಿಂಭಾಗದಲ್ಲಿ ಗೋಡೆಗೆ ಕನಿಷ್ಠ 6 ಇಂಚು ಜಾಗ ಬಿಡಿ. ಗಾಳಿ ಸರಿಯಾಗಿ ಆಡದಿದ್ದರೆ ಒಳಗಿನ ಶಾಖ ಹೊರಗೆ ಹೋಗದೆ ಮೋಟಾರ್ ಅಥವಾ ಕಂಪ್ರೆಸರ್ ಸುಟ್ಟುಹೋಗುವ ಸಾಧ್ಯತೆ ಇರುತ್ತದೆ.
ಒಂದೇ ಪ್ಲಗ್ ಪಾಯಿಂಟ್‌ನಲ್ಲಿ ಹಲವು ಉಪಕರಣಗಳನ್ನು ಹಾಕುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ವೈರಿಂಗ್ ಬಿಸಿಯಾಗಿ ಬೆಂಕಿ ಹೊತ್ತಿಕೊಳ್ಳಬಹುದು.
ಫ್ಯಾನ್, ಎಸಿ ಫಿಲ್ಟರ್ ಮತ್ತು ಕಂಪ್ಯೂಟರ್‌ಗಳಲ್ಲಿ ಧೂಳು ತುಂಬಿದ್ದರೆ ಅವು ಬೇಗನೆ ಬಿಸಿಯಾಗುತ್ತವೆ. ಆದ್ದರಿಂದ ಇವುಗಳನ್ನು ಆಗಾಗ ಸ್ವಚ್ಛಗೊಳಿಸಬೇಕು.
ಇಲೆಕ್ಟ್ರಾನಿಕ್ ವಸ್ತುಗಳನ್ನು ನೇರವಾಗಿ ಸೂರ್ಯನ ಬಿಸಿಲು ಬೀಳುವ ಕಡೆ ಅಥವಾ ಬಿಸಿ ಇರುವ ಜಾಗದಲ್ಲಿ ಇಡಬಾರದು.



