ಹೊಸದಿಗಂತ ವರದಿ ಬೆಳಗಾವಿ:
ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿಯ ಹಣವನ್ನು ಕಳ್ಳತನ ಮಾಡಿರುವ ಘಟನೆ ಅತ್ಯಂತ ದುರಂತದಾಯಕ ಹಾಗೂ ಆಘಾತಕಾರಿ ಎಂದು ಅಖಿಲ ಭಾರತ ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠ ಸಂಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಂತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಪ್ರಕರಣದ ಕುರಿತು ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಎಸ್ಐಟಿ ರಚನೆ ಮಾಡಿದ್ದು, 8 ಜನರನ್ನು ಬಂಧಿಸಿ ತನಿಖೆ ನಡೆಸುತ್ತಿದೆ. ಆದರೆ, ಈ ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಷಡ್ಯಂತ್ರದ ಆರೋಪ:
ರಾಮ ಮಂದಿರದ ಕುರಿತು ಕೆಲ ವಿರೋಧಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಮಂದಿರದ ಪ್ರತಿಷ್ಠಾಪನೆಗೆ ಆಹ್ವಾನ ನೀಡಿದರೂ ಬಾರದವರು, ಈಗ ಮಂದಿರದ ವಿರುದ್ಧ ಮಾತನಾಡುತ್ತಿದ್ದಾರೆ. ಚಿನ್ನ, ಬೆಳ್ಳಿ ಮೂರ್ತಿಗಳ ಕಳ್ಳತನವಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಆದರೆ ಮಂದಿರದ ಟ್ರಸ್ಟ್ ಇದನ್ನು ಸಂಪೂರ್ಣವಾಗಿ ಅಲ್ಲಗಳೆದಿದೆ ಎಂದು ಸ್ಪಷ್ಟಪಡಿಸಿದರು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜನಸಂಖ್ಯೆ ನಿಯಂತ್ರಣ ಹಾಗೂ ಧಾರ್ಮಿಕ ಜಾಗೃತಿ:
ದೇಶದ ಹಿತದೃಷ್ಟಿಯಿಂದ ಪ್ರತಿಯೊಂದು ಹಿಂದೂ ಕುಟುಂಬದಲ್ಲಿ ಕನಿಷ್ಠ ಮೂವರು ಮಕ್ಕಳು ಇರಬೇಕು ಎಂದು ಪ್ರತಿಪಾದಿಸಿದ ಪರಾಂಡೆ, “ಭಾರತೀಯ ಸೇನೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿಯಿರಲಿವೆ. ಒಂದೇ ಮಗು ಇದ್ದರೆ ದೇಶ ಕಾಯುವವರು ಯಾರು?” ಎಂದು ಪ್ರಶ್ನಿಸಿದರು. ಅಲ್ಲದೆ, ಯುವಕರು ಡ್ರಗ್ಸ್ ಹಾಗೂ ಮದ್ಯದ ದಾಸರಾಗುತ್ತಿದ್ದಾರೆ. ಮುಂಬರುವ ಜಾತಿ ಗಣತಿಯಲ್ಲಿ ಎಲ್ಲರೂ ‘ಹಿಂದೂ’ ಎಂದು ನಮೂದಿಸುವಂತೆ ಸಮಾಜಕ್ಕೆ ಸಂತರು ಮತ್ತು ಸ್ವಾಮೀಜಿಗಳು ಮಾರ್ಗದರ್ಶನ ನೀಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ:
ಸಂತರ ಒಗ್ಗಟ್ಟು:
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ವಿಶ್ವ ಹಿಂದೂ ಪರಿಷತ್ ಮತ್ತು ಆರ್ಎಸ್ಎಸ್ ಯಾವುದೇ ಪಕ್ಷಕ್ಕೆ ಸೀಮಿತವಲ್ಲ. ಇವು ದೇಶ ಕಟ್ಟುವ ಕೆಲಸ ಮಾಡುತ್ತಿವೆ. ಅಯೋಧ್ಯೆಗೆ ಅಂಟಿರುವ ಈ ಕಳಂಕ ಶೀಘ್ರವೇ ದೂರವಾಗಲಿದೆ” ಎಂದರು. ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದಲ್ಲೂ ಹಿಂದೂಗಳನ್ನು ಒಗ್ಗೂಡಿಸುವ ಕೆಲಸವಾಗಬೇಕು ಎಂದರು.
ಈ ವೇಳೆ ನೂಲ ಸುರಗೀಶ್ವರ ಮಠದ ಗುರು ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಲ್ಲೂರು ಮರಡಿ ಮಠದ ಡಾ. ಪವಾಡೇಶ್ವರ ಶಿವಾಚಾರ್ಯ ಸ್ವಾಮಿಗಳು, ಬಾಘೋಜಿಕೊಪ್ಪ ಹಿರೇಮಠದ ಶ್ರೀ ಡಾ. ಶಿವಲಿಂಗ ಮುರುಗರಾಜೇಂದ್ರ ಸ್ವಾಮಿಗಳು, ಸತ್ತಿಗೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಪಮೇಯರ್ ಹಣಮಂತ ಕೊಂಗಾಲಿ, ಆರ್ ಎಸ್ ಎಸ್ ಪ್ರಮುಖ ಕೃಷ್ಣ ಭಟ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.



