ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ‘ಸುಲ್ತಾನ್’ ಸಲ್ಮಾನ್ ಖಾನ್ ತಮ್ಮ ವಿಶಿಷ್ಟ ಸ್ಟೈಲ್ ಮತ್ತು ಫಿಟ್‌ನೆಸ್‌ನಿಂದಲೇ ಹೆಸರುವಾಸಿಯಾದವರು. ಆದರೆ, ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಲು ಭಾಯ್ ಕಾಣಿಸಿಕೊಂಡ ರೀತಿಗೆ ಇಡೀ ಬಾಲಿವುಡ್ ವಲಯವೇ ಶಾಕ್ ಆಗಿದೆ. ಅವರ ತೀರಾ ಭಿನ್ನವಾದ ಹಾಗೂ ನಿಶ್ಯಕ್ತವಾಗಿರುವಂತೆ ಕಾಣುವ ಅವತಾರವನ್ನು ನೋಡಿ, ಅಭಿಮಾನಿಗಳು ಭಾಯ್‌ಜಾನ್ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಐಟಿ ಸರ್ವರ್ ರೂಮ್ ಉದ್ಘಾಟನೆ ವೇಳೆ ಬದಲಾದ ಸಲ್ಲು
ಮುಂಬೈನ ಸ್ಲಮ್ ರಿಹ್ಯಾಬಿಲಿಟೇಶನ್ ಅಥಾರಿಟಿ ಕಚೇರಿಯ ಐಟಿ ಸರ್ವರ್ ರೂಮ್ ಉದ್ಘಾಟನಾ ಸಮಾರಂಭಕ್ಕೆ ಸಲ್ಮಾನ್ ಖಾನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸದಾ ಗಡ್ಡ-ಮೀಸೆಯೊಂದಿಗೆ ಮಾಸ್ ಲುಕ್‌ನಲ್ಲಿ ಮಿಂಚುತ್ತಿದ್ದ ಸಲ್ಮಾನ್, ಈ ಕಾರ್ಯಕ್ರಮಕ್ಕೆ ಸಂಪೂರ್ಣ ಕ್ಲೀನ್ ಶೇವ್ ಮಾಡಿಕೊಂಡು, ತಲೆಗೆ ಹ್ಯಾಟ್ ಧರಿಸಿ ಅತ್ಯಂತ ಸರಳವಾದ ಶರ್ಟ್‌ನಲ್ಲಿ ಬಂದಿದ್ದರು.
ವಯಸ್ಸಾದ ಲುಕ್ ಕಂಡು ನೆಟ್ಟಿಗರು ಆಶ್ಚರ್ಯ
ಬಿಡುಗಡೆಯಾಗಿರುವ ವಿಡಿಯೋ ಮತ್ತು ಫೋಟೋಗಳಲ್ಲಿ ಸಲ್ಮಾನ್ ಖಾನ್ ಮುಖದಲ್ಲಿ ವಯಸ್ಸಾದ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಅವರ ಕಣ್ಣುಗಳ ಸುತ್ತಲಿನ ಕಪ್ಪು ವರ್ತುಲ ಮತ್ತು ಸುಕ್ಕುಗಳು ನೆಟ್ಟಿಗರ ಗಮನ ಸೆಳೆದಿವೆ. “ಅಯ್ಯಯ್ಯೋ, ನಮ್ಮ ಸಲ್ಲು ಭಾಯ್‌ಗೆ ಏನಾಗಿಹೋಯ್ತು? ಇವರು ನಿಜಕ್ಕೂ ಸಲ್ಮಾನ್ ಖಾನ್ ಅವರೇನಾ?” ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು “ವಯಸ್ಸು ಯಾರನ್ನೂ ಬಿಡುವುದಿಲ್ಲ, ನಮ್ಮ ನೆಚ್ಚಿನ ನಟನಿಗೂ ವಯಸ್ಸಾಗುತ್ತಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:
ಹೊಸ ಸಿನಿಮಾದ ಲುಕ್ ಇರಬಹುದೇ?
ಸಲ್ಮಾನ್ ಖಾನ್ ಈ ಹಠಾತ್ ಬದಲಾವಣೆಯ ಹಿಂದೆ ಅವರ ಮುಂದಿನ ದೊಡ್ಡ ಸಿನಿಮಾದ ಪಾತ್ರದ ತಯಾರಿ ಇರಬಹುದು ಎಂದೂ ಕೆಲವರು ಅಂದಾಜಿಸುತ್ತಿದ್ದಾರೆ. ಸಾಮಾನ್ಯವಾಗಿ ಸಲ್ಮಾನ್ ತಮ್ಮ ಸಿನಿಮಾಗಳಿಗಾಗಿ ಭಿನ್ನ ಶೈಲಿಯ ಬಾಡಿ ಟ್ರಾನ್ಸ್‌ಫಾರ್ಮೇಷನ್ ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ಕ್ಲೀನ್ ಶೇವ್ ಅವತಾರವು ಅವರ ಮುಂಬರುವ ಚಿತ್ರದ ಭಾಗವಾಗಿರಬಹುದು. ಆದಾಗ್ಯೂ, ಸಲ್ಮಾನ್ ಖಾನ್ ಅವರ ಈ ಹೊಸ ವಿಡಿಯೋ ಮಾತ್ರ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.



