ನಮ್ಮಲ್ಲಿ ಹೆಚ್ಚಿನವರಿಗೆ ಸ್ನಾನ ಮಾಡಿದ ತಕ್ಷಣ ಅಥವಾ ಕಿವಿಯಲ್ಲಿ ತುರಿಕೆ ಉಂಟಾದಾಗ ಇಯರ್ ಬಡ್ಸ್, ಬೆಂಕಿಕಡ್ಡಿ, ಹೇರ್ ಪಿನ್ ಅಥವಾ ಕಾಗದದ ಸುರುಳಿಗಳನ್ನು ಕಿವಿಯೊಳಗೆ ಹಾಕಿ ಸ್ವಚ್ಛಗೊಳಿಸುವ ಅಭ್ಯಾಸವಿರುತ್ತದೆ. ಕಿವಿಯಲ್ಲಿರುವ ಮೇಣವನ್ನು (Earwax) ತೆಗೆಯಲು ನಾವು ಮಾಡುವ ಈ ಕೆಲಸ ಎಷ್ಟು ಅಪಾಯಕಾರಿ ಮತ್ತು ಇದರಿಂದ ಕಿವಿಗೆ ಎಂತಹ ಗಂಭೀರ ಹಾನಿಯಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ.
ಮೇಣವು ಕಿವಿಯಾಳಕ್ಕೆ ತಳ್ಳಲ್ಪಡುತ್ತದೆ
ನಾವು ಬಡ್ಸ್ ಬಳಸಿ ಮೇಣವನ್ನು ಹೊರಗೆ ತೆಗೆಯಲು ಪ್ರಯತ್ನಿಸಿದಾಗ, ಕೇವಲ ಸ್ವಲ್ಪ ಭಾಗ ಮಾತ್ರ ಹೊರಬರುತ್ತದೆ. ಉಳಿದ ಹೆಚ್ಚಿನ ಭಾಗವು ಕಿವಿಯ ಮತ್ತಷ್ಟು ಆಳಕ್ಕೆ ತಳ್ಳಲ್ಪಡುತ್ತದೆ. ಇದರಿಂದ ಮೇಣವು ಗಟ್ಟಿಯಾಗಿ ‘ಇಯರ್ ವ್ಯಾಕ್ಸ್ ಬ್ಲಾಕೇಜ್’ ಉಂಟಾಗುತ್ತದೆ.
ಕಿವಿ ತಮಟೆ ಹರಿದು ಹೋಗುವ ಆತಂಕ
ಕಿವಿಯ ತಮಟೆಯು ಅತ್ಯಂತ ಸೂಕ್ಷ್ಮವಾದ ಪೊರೆಯಾಗಿದೆ. ಕಡ್ಡಿಯನ್ನು ಸ್ವಲ್ಪ ಜೋರಾಗಿ ಅಥವಾ ಆಳವಾಗಿ ಹಾಕಿದರೆ ತಮಟೆಗೆ ತೂತಾಗುವ ಸಾಧ್ಯತೆಯಿರುತ್ತದೆ. ಇದು ತೀವ್ರವಾದ ನೋವು ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು.
ಕೇಳುವ ಸಾಮರ್ಥ್ಯ ಕುಂಠಿತ
ತಮಟೆಗೆ ಹಾನಿಯಾದಾಗ ಅಥವಾ ಮೇಣವು ಗಟ್ಟಿಯಾಗಿ ಕಿವಿಯ ರಂಧ್ರವನ್ನು ಸಂಪೂರ್ಣವಾಗಿ ಮುಚ್ಚಿದಾಗ ತಾತ್ಕಾಲಿಕ ಅಥವಾ ಶಾಶ್ವತ ಕಿವುಡುತನ ಉಂಟಾಗಬಹುದು.
ಗಂಭೀರ ಸೋಂಕುಗಳು
ಬೆಂಕಿಕಡ್ಡಿ ಅಥವಾ ಪಿನ್‌ಗಳನ್ನು ಬಳಸುವುದರಿಂದ ಕಿವಿಯ ಒಳಗಿನ ಮೃದುವಾದ ಚರ್ಮದ ಮೇಲೆ ಗೀರುಗಳು ಬಿದ್ದು, ಗಾಯಗಳಾಗುತ್ತವೆ. ಇವುಗಳಲ್ಲಿ ಬ್ಯಾಕ್ಟೀರಿಯಾಗಳು ಪ್ರವೇಶಿಸಿ ಕಿವಿಯಲ್ಲಿ ಕೀವು ತುಂಬಿಕೊಳ್ಳುವುದು ಮತ್ತು ತೀವ್ರ ತುರಿಕೆಗೆ ಕಾರಣವಾಗುತ್ತದೆ.
ಕಿವಿಯಲ್ಲಿ ಸದಾ ಶಬ್ದ ಕೇಳಿಸುವುದು
ಕಿವಿಯ ಆಳದ ನರಗಳಿಗೆ ಹಾನಿಯಾದಾಗ ಕಿವಿಯೊಳಗೆ ಸದಾ ‘ಝಂ’ ಎಂದು ಗಂಟೆ ಬಾರಿಸಿದಂತಹ ಶಬ್ದ ಕೇಳಿಸುವ ವಿಚಿತ್ರ ಕಾಯಿಲೆ ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ;
ಕಿವಿ ಸ್ವಚ್ಛಗೊಳಿಸುವ ಸರಿಯಾದ ವಿಧಾನ ಯಾವುದು?
ನಮ್ಮ ಕಿವಿಗಳು ತಮ್ಮನ್ನು ತಾವೇ ಸ್ವಚ್ಛಗೊಳಿಸಿಕೊಳ್ಳುವ ನೈಸರ್ಗಿಕ ಗುಣವನ್ನು ಹೊಂದಿವೆ. ನಾವು ಮಾತನಾಡುವಾಗ ಅಥವಾ ಆಹಾರ ಜಗಿಯುವಾಗ ಕಿವಿಯ ಮೇಣವು ತಾನಾಗಿಯೇ ಹರಿದು ಕಿವಿಯ ಹೊರಭಾಗಕ್ಕೆ ಬರುತ್ತದೆ.
ಸ್ನಾನ ಮಾಡಿದ ನಂತರ ಮೃದುವಾದ ಹತ್ತಿ ಬಟ್ಟೆಯಿಂದ ಕಿವಿಯ ಹೊರಭಾಗಕ್ಕೆ ಬಂದಿರುವ ಮೇಣವನ್ನು ಮಾತ್ರ ಮೃದುವಾಗಿ ಒರೆಸಿ ತೆಗೆಯಬೇಕು.
ಕಿವಿಯಲ್ಲಿ ಮೇಣ ಜಾಸ್ತಿಯಾಗಿ ಕಿವಿ ಮುಚ್ಚಿಕೊಂಡಂತೆ ಭಾಸವಾದರೆ, ವೈದ್ಯರ ಸಲಹೆ ಮೇರೆಗೆ ‘ಇಯರ್ ಡ್ರಾಪ್ಸ್’ ಬಳಸಿ ಅದನ್ನು ಕರಗಿಸಬಹುದು.



