ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಕೇಂದ್ರ ಸರ್ಕಾರ ಭದ್ರತಾ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಇತ್ತೀಚಿನ ಭದ್ರತಾ ಪರಿಶೀಲನೆಯ ಬಳಿಕ ಅವರಿಗೆ ಅತ್ಯುನ್ನತ ಮಟ್ಟದ ‘Z+’ ಭದ್ರತೆ ಒದಗಿಸಲಾಗಿದ್ದು, ಸೋಮವಾರದಿಂದಲೇ ಈ ಹೊಸ ವ್ಯವಸ್ಥೆ ಜಾರಿಯಾಗಿದೆ. ಇದರಿಂದ ವಿಜಯ್ ಅವರ ಭದ್ರತಾ ವಲಯ ಇನ್ನಷ್ಟು ಬಲಿಷ್ಠವಾಗಿದೆ.
ಹೊಸ ಭದ್ರತಾ ವ್ಯವಸ್ಥೆಯಡಿ 24 ಗಂಟೆಗಳ ಕಾಲ ಕಣ್ಗಾವಲು ಇರಲಿದ್ದು, 55ಕ್ಕೂ ಹೆಚ್ಚು ಕೇಂದ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರಲ್ಲಿ NSG ಕಮಾಂಡೋಗಳೂ ಸೇರಿದ್ದು, ಎಲ್ಲರೂ ಅತ್ಯಾಧುನಿಕ MP5 ಸಬ್ ಮೆಷಿನ್ ಗನ್‌ಗಳನ್ನು ಹೊಂದಿದ್ದಾರೆ. ಜೊತೆಗೆ ವಿಜಯ್ ಅವರ ಸಂಚಾರಕ್ಕಾಗಿ ಗುಂಡು ನಿರೋಧಕ ವಾಹನ ಹಾಗೂ ಪೈಲಟ್ ಕಾರಿನ ವ್ಯವಸ್ಥೆಯನ್ನೂ ಮಾಡಲಾಗಿದೆ.
ಇದನ್ನೂ ಓದಿ:
ಈ ಹಿಂದೆ ‘Y’ ವರ್ಗದ ಭದ್ರತೆ ಹೊಂದಿದ್ದ ವಿಜಯ್ ಅವರಿಗೆ ಇದೀಗ ಜೀವ ಬೆದರಿಕೆ ಮೌಲ್ಯಮಾಪನದ ಹಿನ್ನೆಲೆ ‘Z+’ ಭದ್ರತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೇಶದ ಪ್ರಮುಖ ರಾಜಕೀಯ ನಾಯಕರು ಹಾಗೂ ಹೆಚ್ಚಿನ ಅಪಾಯ ಎದುರಿಸುವ ವ್ಯಕ್ತಿಗಳಿಗೆ ಮಾತ್ರ ಈ ಮಟ್ಟದ ಭದ್ರತೆ ನೀಡಲಾಗುತ್ತದೆ.
ಇದೇ ವೇಳೆ ತಮಿಳುನಾಡು ವಿಧಾನಸಭೆಯ 17ನೇ ಅಧಿವೇಶನದಲ್ಲಿ ವಿಜಯ್ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪೆರಂಬೂರ್ ಕ್ಷೇತ್ರದ ಪ್ರತಿನಿಧಿಯಾಗಿ ಅವರು ಪ್ರಮಾಣ ವಚನ ತೆಗೆದುಕೊಂಡ ಬಳಿಕ ಸಚಿವರು ಹಾಗೂ ಇತರ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.



