ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಮತ್ತೆ ಮುಂಗಾರು ಅಬ್ಬರಿಸಿದ್ದು, ಭಾರೀ ಮಳೆ ಹಲವು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಸಿದೆ. ಮಲಪ್ಪುರಂ, ಇಡುಕ್ಕಿ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಏಕಾಏಕಿ ಪ್ರವಾಹ, ಮಣ್ಣಿನ ಕುಸಿತ ಮತ್ತು ಭೂಕುಸಿತ ಸಂಭವಿಸಿದ್ದು, ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ.
ಮಲಪ್ಪುರಂನ ನೀಲಂಬೂರ್–ಅಮರಂಬಲಂ ಪ್ರದೇಶದಲ್ಲಿ ಭಾನುವಾರ ಸಂಜೆ ಕೊಟ್ಟಪ್ಪುಝ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾಗಿ ಹಲವರು ಕೊಚ್ಚಿಹೋಗಿದ್ದರು. ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಹಲವು ಮಂದಿಯನ್ನು ರಕ್ಷಿಸಿದ್ದು, ನಾಪತ್ತೆಯಾಗಿರುವವರಿಗಾಗಿ ಶೋಧ ಮುಂದುವರಿದಿದೆ. ಮೇಲ್ಭಾಗದ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದ ನದಿಯಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:
ಪ್ರತಿ ಗಂಟೆಗೊಮ್ಮೆ ಪರಿಶೀಲಿಸಿ
ಮಳೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅಧಿಕಾರಿಗಳಿಗೆ ಪರಿಸ್ಥಿತಿಯನ್ನು ಪ್ರತಿ ಗಂಟೆಗೊಮ್ಮೆ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಜನರಿಗೆ ಹವಾಮಾನ ಮುನ್ನೆಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗಿದ್ದು, ಅಗತ್ಯವಿದ್ದರೆ ಅಪಾಯದ ಪ್ರದೇಶಗಳಲ್ಲಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.
ಮಳೆಯ ಅಬ್ಬರದ ನಡುವೆ ನದಿ, ಗುಡ್ಡ ಹಾಗೂ ಭೂಕುಸಿತ ಸಂಭವಿಸುವ ಪ್ರದೇಶಗಳಲ್ಲಿ ಜನರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದ್ದು, ರಕ್ಷಣಾ ಕಾರ್ಯಾಚರಣೆಗಳ ಮೇಲೆ ಆಡಳಿತದ ಗಮನ ಕೇಂದ್ರೀಕೃತವಾಗಿದೆ.



