October 10, 2026
Saturday, October 10, 2026
spot_img

ಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ 8 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಾಣ ಕಾಪಾಡಿದ ಗ್ರಾಮಸ್ಥರು: ಇಬ್ಬರು ನೀರುಪಾಲು

ಹೊಸದಿಗಂತ ವರದಿ ದಾವಣಗೆರೆ:

ಕಿರುಪ್ರವಾಸಕ್ಕೆ ತೆರಳಿದ್ದ 10 ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರು ಪಾಲಾಗಿದ್ದು, ಉಳಿದ 8 ಮಂದಿ ಸ್ಥಳೀಯರ ನೆರವಿನೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕು ಮರಬನಹಳ್ಳಿ ಗ್ರಾಮ ಸಮೀಪದ ಭದ್ರಾ ನಾಲೆಯಲ್ಲಿ ಗುರುವಾರ ಮಧ್ಯಾಹ್ನ ವರದಿಯಾಗಿದೆ.

ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಐಎಸ್ ವಿಭಾಗದ ೮ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಮಾನಸಿ ಸಿಂಧೆ(22 ವರ್ಷ), ಹೆಚ್.ಎಸ್.ವಿವೇಕ್(22) ಮೃತ ದುರ್ದೈವಿಗಳು.

ನಾಲ್ಕೈದು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ 2 ತಿಂಗಳ ಇಂಟರ್ನಶಿಪ್ ಮುಗಿಸಿಕೊಂಡು ಬಂದು ಅಂತಿಮ ಪರೀಕ್ಷೆಗೆ ತಯಾರಾಗುತ್ತಿದ್ದ ನಾಲ್ವರು ವಿದ್ಯಾರ್ಥಿಗಳು, ಆರು ವಿದ್ಯಾರ್ಥಿನಿಯರು ವಿಹಾರಕ್ಕೆಂದು ದ್ವಿಚಕ್ರ ವಾಹನಗಳಲ್ಲಿ ಮರಬನಹಳ್ಳಿ ಸಮೀಪದ ಭದ್ರಾ ನಾಲೆಯ ಬಳಿ ತೆರಳಿದ್ದರು.

ಇದನ್ನೂ ಓದಿ:

ಬೇಸಿಗೆ ಬೆಳೆಗೆಂದು ಭದ್ರಾ ನಾಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಬಿಡಲಾಗಿದ್ದು, ನೀರಿನಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಆ ವಿದ್ಯಾರ್ಥಿ ರಕ್ಷಣೆಗೆ ಬಂದ ಇನ್ನೊಬ್ಬರು ನೀರಿನ ಸೆಳವಿಗೆ ಸಿಕ್ಕಿದ್ದಾರೆ. ಹೀಗೆ ಹತ್ತೂ ಜನ ವಿದ್ಯಾರ್ಥಿಗಳು ನಾಲೆಯಲ್ಲಿ ಹರಿಯುತ್ತಿದ್ದ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ವಿದ್ಯಾರ್ಥಿಗಳ ಕೂಗಾಟ ಕೇಳಿ ಸ್ಥಳೀಯ ರೈತರು, ಗ್ರಾಮಸ್ಥರು, ದಾರಿಹೋಕರು ನಾಲೆಗೆ ಹಾರಿ, ನೀರಿನ ಸೆಳೆತಕ್ಕೆ ಸಿಲುಕಿದ್ದ 9 ಜನರನ್ನು ರಕ್ಷಣೆ ಮಾಡಿದ್ದು, ಈ ಪೈಕಿ ವಿವೇಕ್ ಸಾಕಷ್ಟು ನೀರು ಕುಡಿದಿದ್ದರಿಂದ ಪ್ರಥಮ ಚಿಕಿತ್ಸೆ ನೀಡಿ ಬದುಕಿಸುವ ಪ್ರಯತ್ನ ಮಾಡುವಷ್ಟರಲ್ಲಾಗಲೇ ಆತ ಪ್ರಾಣ ಬಿಟ್ಟಿದ್ದ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಾನಸಿ ಸಿಂಧೆ ಪತ್ತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ತೊಡಗಿದ್ದು, ಸ್ಥಳೀಯ ಈಜುಪಟುಗಳು ಕೂಡ ಕಾರ್ಯಾಚರಣೆಗೆ ಸಹಕರಿಸಿದ್ದಾರೆ.

ಇನ್ನುಳಿದಂತೆ 8 ಜನ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದರೂ, ತಮ್ಮ ಸ್ನೇಹಿತರಾದ ಮಾನಸಿ ಸಿಂಧೆ ಹಾಗೂ ವಿವೇಕ್ ಸಾವಿನ ಸುದ್ದಿ ನೋವಿಗೀಡು ಮಾಡಿದೆ. ಈ ಬಗ್ಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read